ಬೆಂಗಳೂರು, ಜು 23 (Daijiworld News/MSP): ವಿಶ್ವಾಸ ಮತ ಯಾಚನೆಗೆ ಹಿಂದೇಟು ಹಾಕುತ್ತಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಇಂದು (ಮಂಗಳವಾರ) ಸಂಜೆ 6ರ ಒಳಗೆ ವಿಶ್ವಾಸ ಮತ ಯಾಚಿಸುವಂತೆ ಸ್ಪೀಕರ್ ಡೆಡ್ಲೈನ್ ಕೊಟ್ಟಿದ್ದಾರೆ. ಹೀಗಾಗಿ ಇಂದು ಸರ್ಕಾರದ ಅಳಿವು ಉಳಿವು ಬಹುತೇಕ ನಿರ್ಧಾರವಾಗಲಿದೆ.
ರಾಜಕೀಯ ಹೈಡ್ರಾಮಾವನ್ನು ಮಂಗಳವಾರ ಸಂಜೆ 6 ಗಂಟೆಯೊಳಗೆ ಕೊನೆಗೊಳಿಸಲೇಬೇಕು ಎಂದು ಸ್ಪೀಕರ್ ದೃಢ ನಿಲುವು ತಳೆದಿದ್ದು, ಸಂಜೆ 4 ಗಂಟೆಯೊಳಗೆ ವಿಶ್ವಾಸ ಮತ ಗೊತ್ತುವಳಿ ಮೇಲಿನ ಚರ್ಚೆ ನಡೆಯಲಿದ್ದು, ಬಳಿಕ 5 ಗಂಟೆ ವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಿಸಲಿದ್ದಾರೆ. ಇದಾದ ಬಳಿಕ ಮತದಾನ ಪ್ರಕ್ರಿಯೆ ನಡೆಯಲಿದೆ.
ಈ ನಡುವೆ ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಿದ್ದು, ಸದನಕ್ಕೆ ದೋಸ್ತಿ ಸರ್ಕಾರದ ಬಹುತೇಕ ಶಾಸಕರು ಹಾಜರಾಗಿಲ್ಲ. ಆದರೆ ಬಿಜೆಪಿಯ ಎಲ್ಲಾ 105 ಶಾಸಕರು ಹಾಜರಿದ್ದಾರೆ.
ಬಿಜೆಪಿಯ 105 ಶಾಸಕರು ಸದನದಲ್ಲಿ ಭಾಗಿಯಾಗಿದ್ದು, ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ಸೂಕ್ತ ಸಮಯದಲ್ಲಿ ಆಗಮಿಸದ ಹಿನ್ನಲೆಯಲ್ಲಿ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಮಾತನಾಡಿದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಸದನಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಗ್ಗೆ ಪ್ರಶ್ನಿಸಿ ಸಿಎಂ ಏಕೆ ನಾಪತ್ತೆಯಾಗಿರೋದು? ಎಂದು ಪ್ರಶ್ನಿಸಿದರು.
ಆ ಬಳಿಕ ಸಚಿವ ಖಾದರ್ ಮಾತನಾಡಿ, "ಇಂದು ನಾವು ವಿಶ್ವಾಸಮತ ಯಾಚಿಸುತ್ತೇವೆ. ಆದರೆ ಅದಕ್ಕೂ ಮುಂಚೆ ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಬೇಕಾಗಿದೆ. ನೀವು ನಿಗದಿಪಡಿಸಿದ 6ಗಂಟೆ ಗಡುವಿನೊಳಗೆ ಇಂದು ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ" ಎಂದು ಹೇಳಿದ್ದಾರೆ.