ನವದೆಹಲಿ ಜು 23 (Daijiworld News/MSP): ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೆ ಭಾರತ ತಿರುಗೇಟು ನೀಡಿದ್ದು, ಕಾಶ್ಮೀರದ ಬಿಕ್ಕಟ್ಟಿಗೆ ಮಧ್ಯಸ್ಥಿಕೆ ವಹಿಸಲು ನಿಮಗೆ ಆಹ್ವಾನವನ್ನೇ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಅಮೇರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಶ್ವೇತ ಭವನದಲ್ಲಿ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಭಾರತವೇ ಆಹ್ವಾನ ನೀಡಿದಂತೆ, "ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ" ಎಂದು ತಿಳಿಸಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಭಾರತ, ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳನ್ನು ಕೇವಲ ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸುಕೊಳ್ಳುತ್ತೇವೆ ಅದಕ್ಕೆ ಅಮೇರಿಕಾ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದಿದೆ.
ಕಾಶ್ಮೀರ ಬಿಕ್ಕಟ್ಟು ಬಗ್ಗೆ ಮಧ್ಯಸ್ಥಿಕೆ ಕುರಿತ ಡೊನಾಲ್ಡ್ ಟ್ರಂಪ್ ಹೇಳಿಕೆ ವಿವಾದಕ್ಕೆ ಹಾಗೂ ಚರ್ಚೆಗೆ ಎಡೆಮಾಡಿಕೊಟ್ಟ ಹಿನ್ನಲೆಯಲ್ಲಿ ವಿಪಕ್ಷಗಳು ತಕ್ಷಣ ಪ್ರಧಾನಿ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದವು. ಟ್ರಂಪ್ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, " ಆ ರೀತಿಯ ಯಾವುದೇ ನಿವೇದನೆ ಟ್ರಂಪ್ ಜೊತೆ ಮೋದಿ ಮಾಡಿಲ್ಲ. ಪಾಕ್ ಹಾಗೂ ಭಾರತ ನಡುವೆ ಯಾವುದೇ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕು ಅದರ ಬದಲು ಮಧ್ಯಸ್ಥಿಕೆಯಿಂದ ಅಲ್ಲ. ಆದರೆ ಅದಕ್ಕೂ ಮುಂಚೆ ಪಾಕಿಸ್ತಾನ ಉಗ್ರ ಕೃತ್ಯಗಳಿಗೆ ನೀಡುವ ಕುಮ್ಮಕ್ಕು ನಿಲ್ಲಿಸಬೇಕು" ಎಂದು ಹೇಳಿದ್ದಾರೆ.