ಬೆಂಗಳೂರು, ಜು 23 (Daijiworld News/MSP): ವಿಶ್ವಾಸಮತಯಾಚನೆ ವಿಳಂಬ ಮಾಡಿಕೊಂಡು ಬರುತ್ತಿದ್ದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರಕ್ಕೆ, 'ಸುಪ್ರೀಂಕೋರ್ಟ್ ವಿಚಾರಣೆ' ಒಂದೆಡೆ ನಿರಾಸೆ ತಂದಿದ್ರೆ, ಇನ್ನೊಂದೆಡೆ ಬಿಜೆಪಿ 'ಒತ್ತಡ ತಂತ್ರ' ಇಕ್ಕಟ್ಟಿಗೆ ಸಿಲುಕಿಸಿದೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಬಹುಮತ ಸಾಬೀತುಪಡಿಸಿ ಇಲ್ಲವೇ ಕೂಡಲೇ ರಾಜೀನಾಮೆ ನೀಡಿ ಹೊರನಡೆಯಿರಿ ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್ ನಲ್ಲಿ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ , ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ವಿಶ್ವಾಸಮತ ಯಾಚನೆ ನಿರ್ಣಯ ಪ್ರಕ್ರಿಯೆ ಕೊನೆಗೊಂಡರೆ, ಈ ಸಂಬಂಧ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ಕೈಗೆತ್ತಿಕೊಳ್ಳುವುದಾಗಿ ಹೇಳಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪಕ್ಷೇತರ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿ, ಸೋಮವಾರ ಮಧ್ಯರಾತ್ರಿಯವರೆಗೂ ಅಧಿವೇಶನ ನಡೆದಿದೆ. ಮಂಗಳವಾರ ಸಂಜೆ 6 ಗಂಟೆಗೆ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಆದರೆ ಕಲಾಪ ಆರಂಭವಾದ ದಿನಂಪ್ರತಿ ಕಲಾಪದಲ್ಲಿ ಹೀಗೆ ನಡೆಯುತ್ತಿದೆ ಹೀಗಾಗಿ ತಕ್ಕ ಸೂಚನೆ ನೀಡಿ ಎಂದು ಪೀಠದಲ್ಲಿ ಮನವಿ ಮಾಡಿದರು.
ಈ ವಾದಕ್ಕೆ ಪ್ರತಿವಾದ ಮಂಡಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಜುಲೈ 18ಕ್ಕೆ ಕಲಾಪ ಪ್ರಾರಂಭವಾಗಿದ್ದು, ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿದೆ. ಹೀಗಾಗಿ ಚರ್ಚೆ ಮಧ್ಯೆ ಮತಕ್ಕೆ ಹಾಕುವುದು ಹೇಗೆ ಎಂದು ವಾದಿಸಿದರು. ಈ ಸಂದರ್ಭ ಮುಖ್ಯ ನ್ಯಾಯಮೂರ್ತಿಗಳು, ಬಹುಮತ ಯಾವಾಗ ಸಾಬೀತುಪಡಿಸಲಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲ ಸಿಂಘ್ವಿ ಇಂದು ಸಂಜೆಯ ಆರು ಗಂಟೆಗೆ ಮತಕ್ಕೆ ಹಾಕುವುದಾಗಿ ಸ್ಪೀಕರ್ ತಿಳಿಸಿದ್ದಾರೆ ಎಂದು ಉತ್ತರಿಸಿದರು. ಹಾಗಿದ್ದರೆ ನಾವು ಅದಕ್ಕಾಗಿ ಕಾದು ನೋಡುತ್ತೇವೆ ನಾಳೆಗೆ ವಿಚಾರಣೆ ನಡೆಸೋಣ ಎಂದು ದಿನ ವಿಚಾರಣೆಯನ್ನು ಮುಕ್ತಾಯಗೊಳಿಸಿದರು.