ಬೆಂಗಳೂರು,ಜು 23 (Daijiworld News/MSP): ಮದುವೆಯಾಗಿ 12 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಕೊರಗಿನಲ್ಲಿ ಕಾಲಕಳೆಯುತ್ತಿದ್ದ ದಂಪತಿಯು ಜಾಹೀರಾತೊಂದನ್ನು ನಂಬಿ ಮಾತ್ರೆ ನುಂಗಿದ ಪರಿಣಾಮ ಪತಿ ಸಾವನ್ನಪ್ಪಿ ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಶಶಿಧರ್ (42) ಮೃತ ದುರ್ದೈವಿ. ಪತ್ನಿ ಗಂಗಾಂಬಿಕಾ(37) ತೀವ್ರ ಅಸ್ವಸ್ಥರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2008ರಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶಿದ ದಂಪತಿಗಳಿಗೆ ಮಕ್ಕಳಾಗಲಿಲ್ಲವೆಂಬ ಕೊರಗು ಕಾಡುತ್ತಿತ್ತು.
ಇದೇ ಸಂದರ್ಭದಲ್ಲಿ ಬಿಹಾರ ನೋಂದಣಿಯ ಕಾರಿನಲ್ಲಿ ಜಾಹಿರಾತು ಹಾಕಿಕೊಂಡು ಬಂದ ಮೂವರು ನಮ್ಮಲ್ಲಿರುವ ಮಾತ್ರೆ ನುಂಗಿದರೆ ಗರ್ಭಧರಿಸುತ್ತೀರಿ ಎಂದು ಮಾತಿನಲ್ಲೇ ಮರಳು ಮಾಡಿದ್ದಾರೆ. ದಂಪತಿಗಳು ಮಕ್ಕಳ ಆಸೆಯಲ್ಲಿ ಮಾತ್ರೆ ನೀಡುವಂತೆ ಹೇಳಿದ್ದಾರೆ. 25 ಸಾವಿರ ರುಪಾಯಿ ಮಾತ್ರೆ ಇದು ಜಾಹೀರಾತುದಾರರು ನಂಬಿಸಿದ್ದಾರೆ. ದಂಪತಿಗಳು ಅಷ್ಟು ಮೊತ್ತದ ದುಡ್ಡಿಲ್ಲ ಎಂದು ತಮ್ಮಲ್ಲಿದ್ದ ಎರಡು ಸಾವಿರ ನೀಡಿದ್ದಾರೆ. ಮಾತ್ರೆ ನೀಡಿದ ಮೂವರು ಬಾಕಿ ಉಳಿದ ಹಣಕ್ಕೆ ನಾಳೆ ಬರುವುದಾಗಿ ತಿಳಿಸಿದ್ದಾರೆ.
ಆ ಬಳಿಕ ಮಾತ್ರೆ ನುಂಗಿದ ದಂಪತಿಗೆ 10 ನಿಮಿಷದಲ್ಲೇ ಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆ ತಲುಪುತ್ತಿದ್ದಂತೆ ಪತಿ ಮೃತಪಟ್ಟಿದ್ದು ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.