ಬೆಂಗಳೂರು, ಜು 23 (DaijiworldNews/SM): ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಹೈ ಡ್ರಾಮಾಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಕೊನೆಗೂ ವಿಶ್ವಾಸಮತ ಯಾಚಿಸಿದ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲು ವಿಫಲರಾಗಿದ್ದಾರೆ.
ಆ ಮೂಲಕ ರಾಜ್ಯದಲ್ಲಿ ಆಡಳಿತದಲ್ಲಿದ್ದ ಮೈತ್ರಿ ಸರಕಾರ ಪತನಗೊಂಡಿದೆ. ಸುದೀರ್ಘ ಚರ್ಚೆಯ ಬಳಿಕ ಇಂದು ಸಂಜೆ 7 ಗಂಟೆಗೆ ವಿಶ್ವಾಸ ಮತ ಯಾಚನೆಗೆ ಸಿಎಂ ಕುಮಾರಸ್ವಾಮಿ ತಿಳಿಸಿದರು. ಮೊದಲಿಗೆ ಪ್ರಸ್ತಾವದ ಪರ ಇರುವವರ ಮತ ಲೆಕ್ಕ ಮಾಡಲಾಯಿತು. ಬಳಿಕ ಪ್ರಸ್ತಾವದ ವಿರುದ್ಧ ಇರುವ ಮತಗಳನ್ನು ಎಣಿಕೆ ಮಾಡಲಾಯಿತು.
ಕುಮಾರಸ್ವಾಮಿ ಪರವಾಗಿ 99 ಮತಗಳು ಚಲಾವಣೆಗೊಂಡರೆ, ಬಿಜೆಪಿ ಪರ 105 ಮತಗಳು ಚಲಾವಣೆಗೊಂಡಿದ್ದು, ಸಿಎಂ ಕುಮಾರಸ್ವಾಮಿ ಬಹುಮತ ಕಳೆದುಕೊಂಡಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ, ಬಿಜೆಪಿ ಶಾಸಕರು ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ. ಸದನದಲ್ಲಿಯೇ ಯಡಿಯೂರಪ್ಪ ಅವರಿಗೆ ಪಕ್ಷದ ಶಾಸಕರು ಅಭಿನಂದಿಸಿದ್ದಾರೆ. ಮಾತ್ರವಲ್ಲದೆ, ಸರಕಾರ ರಚನೆಗೆ ಕಸರತ್ತುಗಳನ್ನು ಆರಂಭಿಸಿದ್ದಾರೆ.
2018ರ ಮೇ 24ರಂದು ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರಕ್ಕೆ ಏರಿದ್ದರು. ಆದರೆ 2019ರ ಜುಲೈ 23ರಂದು ವಿಶ್ವಾಸಮತ ಕಳೆದುಕೊಂಡಿದ್ದಾರೆ. ಆ ಮೂಲಕ ಕಳೆದ 14 ತಿಂಗಳ ಮೈತ್ರಿ ಸರಕಾರದ ಆಡಳಿತ ಅಂತ್ಯಗೊಂಡಿದೆ.