ಬೆಂಗಳೂರು, ಜು24(Daijiworld News/SS): ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರದಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.
ಜು.23ರಿಂದ ಸಂಜೆ 6 ಗಂಟೆಯಿಂದ 48 ಗಂಟೆಗಳ ಕಾಲ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡುತ್ತಿದ್ದು, 5 ಜನಕ್ಕಿಂತ ಜಾಸ್ತಿ ಜನ ಒಂದು ಕಡೆ ಸೇರುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ, ಬುಧವಾರ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಬಾರ್, ವೈನ್ ಸ್ಟೋರ್ ಪಬ್’ಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಸನ್ನಿವೇಶಗಳನ್ನು ಕೆಲ ಕಿಡಿಗೇಡಿಗಳು ಸಮಾಜಘಾತಕ ಕಾರ್ಯಗಳಲ್ಲಿ ತೊಡಗಿಸುವ ಸಾಧ್ಯತೆಗಳಿರುತ್ತದೆ. ಮಧ್ಯದ ಅಮಲಿನಲ್ಲಿ ಮತ್ತಷ್ಟು ಅಚಾತುರ್ಯಗಳಾಗುವ ಸಾಧ್ಯತೆಗಳಿರುವುದರಿಂದ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 144 ಜಾರಿಮಾಡಿದ್ದೇವೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
ರಾಜ್ಯ ರಾಜಕಾರಣ ಹಾಗೂ ಪ್ರಸ್ತುತ ವಿದ್ಯಮಾನಗಳ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.