ಬೆಂಗಳೂರು, ಜು24(Daijiworld News/SS): ಜು.22ರಂದು ನಭದತ್ತ ಚಿಮ್ಮಿದ ಚಂದ್ರಯಾನ-2 ಗಗನ ನೌಕೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.
ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್'ಗಳ ವೈಜ್ಞಾನಿಕ ಪರಿಕರಗಳನ್ನು ಹೊತ್ತ ಚಂದ್ರಯಾನ-2 ಉಪಗ್ರಹ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಪೂರ್ವ ನಿಗದಿಯಂತೆ ಸೆಪ್ಟೆಂಬರ್ 7 ರಂದು ಚಂದ್ರನ ಮೈಲ್ಮೆ ತಲುಪಲಿದೆ ಎಂದು ಇಸ್ರೋ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಸ್ವಲ್ಪ ಪ್ರಮಾಣದಲ್ಲಿ ಮೈಲಿಗಲ್ಲು ಸಾಧಿಸಲಾಗಿದೆ. ಅದನೆಲ್ಲಾ ಈಗ ಬಹಿರಂಗಗೊಳಿಸಲು ಸಾಧ್ಯವಿಲ್ಲ. ಆದರೆ, ಆ ಸಂದರ್ಭ ಬಂದಾಗ ಎಲ್ಲವನ್ನೂ ವಿವರಿಸಲಾಗುತ್ತದೆ. ಇಸ್ರೋ ನಿರ್ಮಿತ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಪಗ್ರಹ ಚಂದ್ರನ ಮೇಲ್ಮೆ ಬಗ್ಗೆ ಅಧ್ಯಯನ ನಡೆಸಲಿದೆ. ಇದು ಯಶಸ್ವಿಯಾದರೆ ರಷ್ಯಾ, ಅಮೆರಿಕಾ, ಚೀನಾ ನಂತರ ಚಂದ್ರನ ಪ್ರವೇಶ ಮಾಡಲಿರುವ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂದ್ರಯಾನ-2 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ-ಮಾರ್ಕ್ 3 ವಾಹಕ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭದತ್ತ ಚಿಮ್ಮಿತ್ತು. ರಾಕೆಟ್'ನಿಂದ ಚಂದ್ರಯಾನ-2 ಉಪಗ್ರಹ ಪ್ರತ್ಯೇಕಗೊಂಡ ಬಳಿಕ ಬೆಂಗಳೂರಿನಲ್ಲಿರುವ ಇಸ್ರೋ ನಿಯಂತ್ರಣ ಕೇಂದ್ರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.