ಹೊಸದಿಲ್ಲಿ, ಜು24(Daijiworld News/SS): ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದ್ದ ಜುಲೈ 31ರ ಗಡುವನ್ನು ವಿಸ್ತರಿಸಲಾಗಿದ್ದು, ಆಗಸ್ಟ್ 31ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐಟಿಆರ್) ಗಡುವು ಆಗಸ್ಟ್ 31ರವರೆಗೆ ವಿಸ್ತರಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇದೇ ತಿಂಗಳ (ಜುಲೈ) 31ರ ಒಳಗಾಗಿ ಐಟಿಆರ್ ಸಲ್ಲಿಸುವಂತೆ ಗಡುವು ನೀಡಲಾಗಿತ್ತು. ಆದರೆ, 2018–19ನೇ ಹಣಕಾಸು ವರ್ಷಕ್ಕೆ ಮೂಲದಲ್ಲೇ ತೆರಿಗೆ ಕಡಿತದ (ಟಿಡಿಎಸ್) ವಿವರ ಕೈಸೇರಲು ವಿಳಂಬವಾಗಿತ್ತು. ಹೀಗಾಗಿ ಗಡುವನ್ನು ವಿಸ್ತರಿಸುವಂತೆ ಬೇಡಿಕೆ ಕೇಳಿಬಂದಿತ್ತು. ಇದೀಗ ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಈ ಬೇಡಿಕೆಗೆ ಸ್ಪಂದಿಸಿದೆ ಎಂದು ಸಚಿವಾಲಯ ಹೇಳಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿಯು ಐಟಿಆರ್ ಸಲ್ಲಿಕೆಗೆ ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳ ಕಾಲ ಮುಂದೂಡಿದೆ. ಈ ಮೊದಲು 31 ಜುಲೈ 2019 ಕೊನೆ ದಿನಾಂಕವಾಗಿತ್ತು. ಪರಿಷ್ಕೃತ ಆದೇಶದ ಪ್ರಕಾರ 31 ಆಗಸ್ಟ್ 2019 ಐಟಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಇದರಿಂದ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ. ನಿಗದಿತ ದಿನಾಂಕದ ನಂತರದ ಪಾವತಿಗೆ 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.