ತಿರುವನಂತಪುರಂ, ಜು24(Daijiworld News/SS): ನೆರೆಮನೆಯವರ ನಾಯಿಯ ಜತೆಗೆ ಅನೈತಿಕ ಸಂಬಂಧ ಇತ್ತು ಎಂಬ ಕಾರಣಕ್ಕೆ ತಮ್ಮ ಮೂರು ವರುಷದ ನಾಯಿಯನ್ನು ದೂರ ಮಾಡಿದ ಅಪರೂಪದ ಘಟನೆಯೊಂದು ನಡೆದಿದೆ.
ಮನೆಯಿಂದ ಹೊರ ಹಾಕಲಾಗಿರುವ ನಾಯಿಯ ಕೊರಳಿನಲ್ಲಿ ಕೊರಳಪಟ್ಟಿಯೊಂದನ್ನು ಹಾಕಲಾಗಿದ್ದು, ಅದರಲ್ಲಿ "ಇದು ಆತ್ಯುತ್ತಮ ತಳಿಯ, ಒಳ್ಳೆ ನಡವಳಿಕೆ ಉಳ್ಳ ನಾಯಿ. ಇದಕ್ಕೆ ಭಾರೀ ಆಹಾರ ಬೇಕು ಅಂತಲೂ ಇಲ್ಲ. ಯಾವುದೇ ಕಾಯಿಲೆಗಳಿಲ್ಲ. ಸಾಮಾನ್ಯವಾಗಿ ಐದು ದಿನಗಳಿಗೆ ಒಮ್ಮೆ ಸ್ನಾನ ಮಾಡಿಸಲಾಗುತ್ತದೆ. ಇದು ಕೇವಲ ಬೊಗಳುತ್ತದೆ. ಮೂರು ವರ್ಷದಲ್ಲಿ ಯಾರನ್ನೂ ಕಡಿದಿಲ್ಲ. ಹಾಲು, ಬಿಸ್ಕೆಟ್ ಮತ್ತು ಮೊಟ್ಟೆ ಇದರ ಮುಖ್ಯ ಆಹಾರ. ನೆರೆಮನೆಯ ನಾಯಿ ಜತೆಗೆ ಅನೈತಿಕ ಸಂಬಂಧ ಇದಕ್ಕಿದೆ ಎಂದು ತಿಳಿದುಬಂತು. ಅದಕ್ಕಾಗಿಯೇ ಇದನ್ನು ಮನೆಯಿಂದ ಹೊರ ಹಾಕಿದ್ದೀವಿ" ಎಂದು ಬರೆಯಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಸ್ವಯಂ ಸೇವಕ ಶಮೀನ್, ಪ್ರಾಣಿಗಳನ್ನು ದೂರ ಮಾಡಲು ಇರುವ ಅಸಾಮಾನ್ಯ ಕಾರಣಗಳಲ್ಲಿ ಇದು ಕೂಡ ಒಂದು. ಸಾಮಾನ್ಯವಾಗಿ ಪ್ರಾಣಿಗಳನ್ನು ಅನಾರೋಗ್ಯ ಅಥವಾ ಗಾಯಗಳಿಂದಾಗಿ ದೂರ ಮಾಡುತ್ತಾರೆ. ಆದರೆ ಪ್ರಾಣಿಗಳು ಎಂದಿಗೂ ಅಕ್ರಮ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.
ಪೊಮೇರಿಯನ್ ನಾಯಿಯ ಫೋಟೋವನ್ನು ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಫೇಸ್ ಬುಕ್'ನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.