ಬೆಂಗಳೂರು, ಜು24(Daijiworld News/SS): ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸಂಸದೆ ಸುಮಲತಾ ಅಂಬರೀಷ್ ಅವರು ಬಿ. ಎಸ್. ಯಡಿಯೂರಪ್ಪ ಅವರಿಗೆ ಶುಭ ಕೋರಿದ್ದಾರೆ.
ವಿಶ್ವಾಸಮತ ಯಾಚನೆಯಲ್ಲಿ ವಿಫಲರಾಗಿ ಸಿಎಂ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿರುವ ಬೆನ್ನಲ್ಲೇ ನಾಲ್ಕನೇ ಅವಧಿಗೆ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸುವುದಕ್ಕೆ ಕೆಲ ದಿನಗಳಷ್ಟೇ ಬಾಕಿ ಉಳಿದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಮಲತಾ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆಗಳು. ನನ್ನ ಗೆಲುವಿಗಾಗಿ, ನನ್ನ ಬೆನ್ನಿಗೆ ನಿಂತ ನಾಯಕ ಇಂದು ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಿದ್ದಾರೆ ಎಂಬುದು ಖುಷಿಯ ವಿಚಾರ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರವು ಪತನಗೊಂಡ ಹಿನ್ನೆಲೆಯಲ್ಲಿ, ಬಿಜೆಪಿಯು ಸರ್ಕಾರ ರಚನೆ ಮಾಡಲು ಮುಂದಾಗಿರುವ ಬೆನ್ನಲ್ಲೇ ಸುಮಲತಾ ಅವರು ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಭ ಕೋರಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ಅವರಿಗೆ ಬಿಜೆಪಿಯು ಬೆಂಬಲ ಸೂಚಿಸಿತ್ತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಸುಮಲತಾ ಅಂತರದಿಂದ ಜಯಗಳಿಸಿದ್ದರು.