ತಿರುನೆಲ್ವೇಲಿ, ಜು 24 (Daijiworld News/MSP): ತಮಿಳುನಾಡಿನ ತಿರುನೆಲ್ವೇಲಿ ನಗರಸಭಾ ಮಾಜಿ ಮೇಯರ್ , ಡಿಎಂಕೆ ನಾಯಕಿ ಎಂ. ಉಮಾ ಮಹೇಶ್ವರಿ (65), ಅವರ ಪತಿ ಮುರುಗಾಸಂಕರನ್ (74)ಮತ್ತು ಅವರ ಮನೆಯ ಕೆಲಸದಾಕೆ ಮಾರಿ (30) ಈ ಮೂವರನ್ನು ಮಂಗಳವಾರ ಸಂಜೆ ತಿರುನೆಲ್ವೇಲಿಯ ರೆಡಿಯಾರ್ಪಟ್ಟಿಯಲ್ಲಿರುವ ಸರ್ಕಾರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಬಳಿಯ ಅವರ ಮನೆಯಲ್ಲಿ ಅಪರಿಚಿತ ಗುಂಪು ಅಮಾನುಷವಾಗಿ ಹತ್ಯೆ ಮಾಡಿದೆ.
ಉಮಾ ಮಹೇಶ್ವರಿ 1996 ಮತ್ತು 2001 ರ ನಡುವೆ ತಿರುನೆಲ್ವೇಲಿ ನಗರಸಭೆಯ ಮೊದಲ ಮೇಯರ್ ಆಗಿದ್ದರು. ಅವರ ಪತಿ ಹೆದ್ದಾರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ನಿವೃತ್ತರಾಗಿದ್ದರು. ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಮನೆಯಲ್ಲಿದ್ದ ಆಭರಣಗಳು ಕಾಣೆಯಾಗಿವೆ ಮತ್ತು ಮನೆಯಲ್ಲಿ ಬೀರು ತೆರೆದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಎನ್.ಭಾಸ್ಕರನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಯಂಕೋಟೈನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.
ಮನೆಕೆಲಸದಾಕೆ ಮಾರಿಯ ತಾಯಿ ಮಗಳೂ ಸಂಜೆಯಾದರೂ ಮನೆಗೆ ಮರಳದ ಕಾರಣ ಹುಡುಕಿಕೊಂಡು ಉಮಾ ಮಹೇಶ್ವರಿ ಅವರ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಾರಿ ಅವರು ಉಮಾ ಮಹೇಶ್ವರಿ ಅವರ ಮನೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆಲಸ ಮಾಡುತ್ತಿದ್ದರು.
ಭೀಕರ ಹತ್ಯೆಯ ನಂತರ ತಿರುನೆಲ್ವೇಲಿ ನಗರ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.