ಬೆಂಗಳೂರು, ಜು 24 (Daijiworld News/RD): ರಾಜ್ಯದಲ್ಲಿನ ಮೈತ್ರಿ ಸರ್ಕಾರದ ರಾಜಕೀಯ ಬೆಳವಣಿಗೆಗೆ ನಿನ್ನೆ ತೆರೆ ಬಿದ್ದಿದ್ದು, ಬಿಜೆಪಿಗರ ಹರ್ಷೋದ್ಗಾರ ಮುಗಿಲುಮುಟ್ಟಿದೆ. ಸತತ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈಗಾಗಲೇ ಬಿ.ಎಸ್.ವೈ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದ್ದು, ಕಾರ್ಯಕರ್ತರು, ಪಕ್ಷದ ಮುಖಂಡರು ನಿವಾಸಕ್ಕೆ ಆಗಮಿಸಿ ಸಿಹಿ ತಿಂಡಿ ವಿತರಿಸುವ ಮೂಲಕ ಸಂಭ್ರಮ ಪಡುತ್ತಿದ್ದಾರೆ.ಗುರುವಾರ ಅಧಿಕಾರ ಸ್ವೀಕರಿಸಲಿರುವ ಬಿ.ಎಸ್.ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದು, ಇದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಯಡಿಯೂರಪ್ಪ ಅವರನ್ನು ಅಧಿಕೃತವಾಗಿ ಮತ್ತೊಮ್ಮೆ ಶಾಸಕಾಂಗ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಬಿ.ಎಸ್.ವೈ. ನಿವಾಸಕ್ಕೆ ಬಿಜೆಪಿ ಮುಖಂಡರಾದ ಮಾಧುಸ್ವಾಮಿ, ಕೆ.ಜಿ.ಬೋಪಯ್ಯ, ಗುಪ್ತಚರ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಪುತ್ರಿ ಅರುಣಾದೇವಿ ಹಾಗೂ ಇತರ ಕುಟುಂಬದ ಸದಸ್ಯರು ಆಗಮಿಸಿ ಶುಭಕೋರಿದರು. ಜೊತೆಗೆ ಹಲವು ಬಿಜೆಪಿಯ ಹಿರಿಯ ರಾಜಕೀಯ ಮುಖಂಡರು ಆಗಮಿಸಿ ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಿದರು.
ಮೊದಲು ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದು, ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜ್ಯದಲ್ಲಿ ಇನ್ನು ಅಸ್ತಿತ್ವಕ್ಕೆ ಬರುವ ಬಿಜೆಪಿ ಸರಕಾರ ಈ ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡದೆ ಎಚ್ಚರಿಕೆಯಿಂದ ಹೆಜ್ಜೆಯಿಡಲು ಬಿ.ಎಸ್ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಹೊಸ ಸರ್ಕಾರ ಅಧಿಕಾರ ಸ್ವೀಕರಿಸುವವರೆಗೂ ಎಚ್.ಡಿ.ಕುಮಾರಸ್ವಾಮಿ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.