ನವದೆಹಲಿ, ಜು25(Daijiworld News/SS): ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆಗೆ ಒತ್ತು ನೀಡುವ ತ್ರಿವಳಿ ತಲಾಖ್ ವಿವಾದಿತ ವಿಧೇಯಕವನ್ನು ಕೇಂದ್ರ ಸರ್ಕಾರ ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿದೆ.
ಲೋಕಸಭೆಯಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತ್ರಿವಳಿ ತಲಾಖ್ ಕಾಯ್ದೆ ವಿಧೇಯಕವನ್ನು ಮಂಡಿಸಲಿದ್ದಾರೆ. ಸತತ ಮೂರನೇ ಬಾರಿಗೆ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಕಾಯ್ದೆ ವಿಧೇಯಕ ಮಂಡನೆಯಾಗಲಿದೆ.
ಈ ಹಿಂದೆ ಎರಡು ಬಾರಿ ಬಹುಮತ ಲಭ್ಯವಿರದ ಕಾರಣ ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಅಡ್ಡಿಯಾಗಿತ್ತು. ಪ್ರತಿಪಕ್ಷಗಳು ಇದನ್ನು ಸದನ ಸಮಿತಿ ವರ್ಗಾಯಿಸಿದ್ದರು. ರಾಜ್ಯ ಸಭೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೆಲ ಬದಲಾವಣೆಗಳೊಂದಿಗೆ 2018ರ ಅಂತ್ಯದಲ್ಲಿ ಮರು ಮಂಡನೆ ಮಾಡಲಾಗಿತ್ತು. ಆದರೆ ಸರ್ಕಾರದ ಅವಧಿ ಮುಗಿಯುವವರೆಗೆ ರಾಜ್ಯಸಭೆಯಿಂದ ಅನುಮತಿ ದೊರೆತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಮರು ಮಂಡನೆಗೆ ಸಿದ್ಧವಾಗಿದೆ.
ಈ ಬಾರಿಯೂ ಲೋಕಸಭೆಯಲ್ಲಿ ಅನಾಯಾಸವಾಗಿ ಈ ವಿಧೇಯಕಕ್ಕೆ ಅನುಮೋದನೆ ದೊರೆಯಲಿದ್ದು, ರಾಜ್ಯ ಸಭೆಗೆ ಅಗ್ನಿ ಪರೀಕ್ಷೆ ಎದುರಾಗಲಿದೆ. ಎನ್ಡಿಎ ಭಾಗವಾಗಿರುವ ಜೆಡಿಯು ಕೂಡ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಈ ಬಾರಿಯೂ ವಿಧೇಯಕ ಅಂಗೀಕಾರಗೊಳ್ಳುವುದೂ ಕಷ್ಟಸಾಧ್ಯ ಎನ್ನಲಾಗುತ್ತಿದೆ.