ಶ್ರೀನಗರ, ಜು25(Daijiworld News/SS): ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಯಾತ್ರೆಗೆ ತೆರಳಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಜು.1ರಂದು ಪ್ರಾರಂಭವಾದ ಅಮರನಾಥ ಯಾತ್ರೆಯಲ್ಲಿ ಈವರೆಗೂ 3 ಲಕ್ಷ ಜನರು ಪಾಲ್ಗೊಂಡು ಗುಹಾಂತರ ದೇವಾಲಯದಲ್ಲಿ ಹಿಮಲಿಂಗ ದರ್ಶನ ಪಡೆದು ಪುನೀತರಾಗಿದ್ದಾರೆ.
ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾದ ಈ ದೇವಾಲಯ ಹಿಂದುಗಳಿಗೆ ಪವಿತ್ರ ಕ್ಷೇತ್ರಗಳಲ್ಲೊಂದು. ಜಮ್ಮುವಿನ ಭಗವತಿ ಬೇಸ್ ಕ್ಯಾಂಪ್ನಿಂದ 3,880 ಮೀಗಳಷ್ಟು ಎತ್ತರವಿರುವ ಅಮರನಾಥ ಯಾತ್ರೆಗೆ ವ್ಯಾಪಕ ಬಂದೋಬಸ್ತ್ ನಡುವೆ ಕಾಶ್ಮೀರ ಕಣಿವೆ ಮಾರ್ಗದಲ್ಲಿ ಯಾತ್ರಾರ್ಥಿಗಳು ಪ್ರಯಾಣ ಬೆಳೆಸುತ್ತಿದ್ದಾರೆ.
ಅಮರನಾಥ ಯಾತ್ರೆಗೆ ತೆರಳಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, 24 ದಿನಗಳಲ್ಲಿ ಒಟ್ಟಾರೆ 3 ಲಕ್ಷ ಯಾತ್ರಾರ್ಥಿಗಳು ಅಮರನಾಥ ಗುಹೆಯಲ್ಲಿರುವ ಲಿಂಗವನ್ನು ದರ್ಶನ ಮಾಡಿದ್ದಾರೆ. ಜು.24ರಂದು ಸುಮಾರು 7,778 ಯಾತ್ರಾರ್ಥಿಗಳು ಅಮರನಾಥ ದೇವಾಲಯಕ್ಕೆ ತಲುಪಿದ್ದಾರೆ.
2015 ರಲ್ಲಿಯೂ ಇದೇ ಮಾದರಿಯಲ್ಲಿ ಯಾತ್ರೆ ಪ್ರಾರಂಭವಾದ 24 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಯಾತ್ರಿರ್ಥಿಗಳು ಅಮರನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು.