ಬೆಂಗಳೂರು, ಜು 25 (Daijiworld News/RD): ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಸಂಪುಟ ರಚನೆ ಮಾಡಲು ಎಲ್ಲಾ ರೀತಿಯ ತಯಾರು ನಡೆಸಿದ್ದು, ಗುರುವಾರವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವೇಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ರೇಕ್ ಹಾಕಿದ್ದಾರೆ.
ಅತೃಪ್ತ ಶಾಸಕರ ರಾಜಿನಾಮೆ ಬಳಿಕ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಈಗಾಗಲೇ ಬಹುಮತ ಸಾಬೀತು ಪಡಿಸದೆ ಅಧಿಕಾರದಿಂದ ಕೆಳಗಿಳಿದಿದ್ದು, ಬಿಜೆಪಿಯು ನೂತನ ಸರ್ಕಾರ ರಚನೆ ಮಾಡಲು ಅವಕಾಶ ಒದಗಿ ಬಂದರೂ ಸಹ ಬಿಜೆಪಿ ಪಕ್ಷಕ್ಕೆ ಇನ್ನೊಂದು ಸಂಕಷ್ಟ ಕಾದಿದೆ.
ಈಗಾಗಲೇ 15 ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಅರ್ಜಿಗಳು ಇತ್ಯರ್ಥವಾಗದೆ, ಸ್ಪೀಕರ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಬಾಕಿ ಉಳಿದಿದ್ದು, ಈ ಅರ್ಜಿಗಳು ಇತ್ಯರ್ಥ ಆಗುವವರೆಗೆ ಸರ್ಕಾರ ರಚನೆ ಮಾಡಬಾರದು, ಈ ಬಗ್ಗೆ ಅವಸರ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ. ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 224. ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥವಾಗದೇ ಇರುವುದರಿಂದ ಸದನದ ಒಟ್ಟಾರೆ ಬಲ ಇನ್ನೂ ಸ್ಥಿರವಾಗಿದೆ. ಹೀಗಾಗಿ ಮ್ಯಾಜಿಕ್ ನಂಬರ್ 113. ಆದರೆ ಬಿಜೆಪಿ ಬಳಿ ಪಕ್ಷೇತರರು ಸೇರಿ 107 ಸದಸ್ಯ ಬಲ ಮಾತ್ರವಿದೆ. ಹೀಗಾಗಿ ಈ ತಾಂತ್ರಿಕ ವಿಚಾರಗಳು ಬಗೆಹರಿಯುವವರೆಗೆ ಯಾವುದೇ ತೊಂದರೆಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ಬೇಡ ಎಂಬುದು ವರಿಷ್ಠರ ಸ್ಪಷ್ಟಪಡಿಸಿದ್ದಾರೆ.
ಹಲವು ಬಾರಿ ಬಿಜಿಪಿಗೆ ಮುಖಭಂಗವಾಗಿದ್ದು, ಹಾಗಾಗಿ ಈ ಬಾರಿ ಬಿಜೆಪಿ ಪಕ್ಷವು ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದು, ಅತೃಪ್ತ ಶಾಸಕರ ರಾಜೀನಾಮೆ ಅಂಗಿಕಾರ ಬಳಿಕ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಇತ್ತ ಮೈತ್ರಿ ಸರ್ಕಾರದಿಂದ ಅಸಮಧಾನಗೊಂಡು ಹೊರಬಂದ ಶಾಸಕರ ಮೇಲೆ ಬಿಜೆಪಿ ವರಿಷ್ಠರಿಗೆ ಇನ್ನೂ ನಂಬಿಕೆ ಬಂದಿರದೆ ಇರುವುದು ಈ ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ ದೋಸ್ತಿ ಸರ್ಕಾರ ಬಿದ್ದರೂ ಬಿಜೆಪಿ ಸರ್ಕಾರ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಲು ತಡೆಯೊಡ್ಡಿದ್ದಾರೆ. ರಾಜ್ಯದಲ್ಲಿ ಸ್ಪೀಕರ್ ನಡೆ ಅಂತಿಮವಾಗಿದ್ದು ಅವರ ನಡೆಯನ್ನು ಗಮನಿಸಿಕೊಂಡು ಮುಂದುವರಿಯಬೇಕು ಎಂದು ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.