ಬೆಂಗಳೂರು, ಜು 25(Daijiworld News/MSP): ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಇಬ್ಬರೂ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಎಂಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಚುರುಕುಗೊಳಿಸಿದ್ದು ಇನ್ನೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ರೋಷನ್ ಬೇಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಜು.29 ರಂದು ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಶಾಸಕರಿಬ್ಬರಿಗೆ ಸೂಚಿಸಿದ್ದಾರೆ. ಐಎಂಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಜೊತೆ ಈ ಇಬ್ಬರೂ ಶಾಸಕರು ವ್ಯವಹಾರ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಈ ನಡುವೆ ಐಎಂಎ ಸಂಸ್ಥೆಯ ಲೆಕ್ಕ ಪರಿಶೋಧಕ ಆಗಿದ್ದ ಇಕ್ಬಾಲ್ ಖಾನ್ರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಕಂಪನಿಯ ಐಟಿ ರಿಟನ್ಸ್ನಲ್ಲಿ ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಇಕ್ಬಾಲ್ ರನ್ನು ಬಂಧಿಸಲಾಗಿದೆ. ಆರೋಪಿ ಇಕ್ಬಾಲ್ ಖಾನ್, ಮನ್ಸೂರ್ ಖಾನ್ ಜತೆ ಸೇರಿ ಅನೇಕ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದ ಎಂಬುದು ಎಸ್ಐಟಿ ಅಧಿಕಾರಿಗಳಿಗೆ ವಿಚಾರಣೆ ವೇಳೆ ತಿಳಿದು ಬಂದಿದೆ.