ಯಲ್ಲಾಪುರ, ಜು 25 (Daijiworld News/RD): ಮೈತ್ರಿ ಸರ್ಕಾರದ ವಿರುದ್ಧ ಅಸಮಧಾನಗೊಂಡು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸಿದ್ದರಾಮಯ್ಯ ಮಾತಿನಂತೆ ನಡೆದುಕೊಂಡಿದ್ದೇನೆ, ನಾವು ಬಿಜೆಪಿಯ ಸಂಪರ್ಕದಲ್ಲಿ ಇಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ.
ಅತೃಪ್ತಗೊಂಡು ಮುಂಬೈಯನಲ್ಲಿ ವಾಸ್ತವ ಹೂಡಿದ ಶಿವರಾಮ್ ಹೆಬ್ಬಾರ್, ಯಲ್ಲಾಪುರ ಕ್ಷೇತ್ರಕ್ಕೆ ಬಂದಿದ್ದು, ಈ ವೇಳೆ ಮಾಧ್ಯಮದ ಜೊತೆ ಮತನಾಡಿದ ಅವರು ನಮಗೆ ಬಿಜೆಪಿ ನಾಯಕರ ಜೊತೆ ಸಂಪರ್ಕವಿಲ್ಲ. ಪ್ರಸ್ತುತ ರಾಜ್ಯದಲ್ಲಿ ಆಗುತ್ತಿರುವ ಬಿಜೆಪಿ ಸರ್ಕಾರ ರಚನೆಯ ಬೆಳವಣಿಗೆಗೆ ಸಂಬಂಧ ಪಟ್ಟಂತೆ ಅದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನಾವು ರಾಜೀನಾಮೆ ಕೊಟ್ಟಿದ್ದು, ಕೇವಲ ಶಾಸಕ ಸ್ಥಾನಕ್ಕೆ ಮಾತ್ರ. ಇಂದಿಗೂ ನಾವು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ, ಸಿದ್ದರಾಮಯ್ಯ ಮಾತಿನಂತೆ ದೂರ ಉಳಿದಿದ್ದೇವೆ ಎಂಬ ಹೇಳಿಕೆ ನೀಡಿದ್ದರು.
ಶಿವರಾಮ್ ಹೆಬ್ಬಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಗ್ರಾಸವಾಗಿದ್ದು. ಅತೃಪ್ತ ಶಾಸಕರ ಹಿಂದೆ ಸಿದ್ದರಾಮಯ್ಯರವರ ಕೈವಾಡ ಇದೆಯಾ? ಎಂಬ ಪ್ರಶ್ನೆ ಎಲ್ಲರಲ್ಲಿ ಮನ ಮಾಡಿದೆ. ಆದರೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅತೃಪ್ತ ಶಾಸಕರನ್ನ ಸೇರಿಸಿಕೊಳ್ಳುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಶಿವರಾಮ್ ಹೆಬ್ಬಾರ್ ಈ ಹೇಳಿಕೆ ದಿಕ್ಕು ತಪ್ಪಿಸುವ ತಂತ್ರವಾಗಿ ಪರಿಣಮಿಸಿದೆ.
ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆಯ ಪತ್ರವನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದೇವೆ. ರಾಜೀನಾಮೆ ಅಂಗೀಕಾರವಾದ ಬಳಿಕ, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಎಲ್ಲರೂ ಒಟ್ಟಿಗೆ ಸೇರಿ ಒಂದು ನಿರ್ಧಾರಕ್ಕೆ ಬರುತ್ತೇವೆ. ನಮ್ಮ ನಾಯಕ ಎಂದಿಗೂ ಸಿದ್ದರಾಮಯ್ಯ ಅವರೇ ಆಗಿರುತ್ತಾರೆ ಎಂದರು.
ಈ ವೇಳೆ ಕ್ಷೇತ್ರದ ಜನರಲ್ಲಿ ಕ್ಷಮೆಯಾಚನೆ ಮಾಡಿರುವ ಅವರು, ಕಳೆದ 1 ತಿಂಗಳಿನಿಂದ ನಡೆದ ರಾಜಕೀಯ ಬೆಳವಣಿಗೆ ನನಗೂ ಬೇಸರ ತಂದಿದೆ. ಆದರೆ ಅನಿವಾರ್ಯ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ ಎಂದರು.