ಚೆನ್ನೈ, ಜು 25(Daijiworld News/MSP): ರಾಜೀವ್ ಗಾಂಧಿ ಹಂತಕಿ, ಕಳೆದ 28 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಅವರಿಗೆ ಮದ್ರಾಸ್ ಹೈಕೋರ್ಟ್ 30 ದಿನಗಳ ಪೆರೋಲ್ ನೀಡಿದೆ. ಹೀಗಾಗಿ ಗುರುವಾರ ಬೆಳಗ್ಗೆ ನಳಿನಿ ಜೈಲಿನಿಂದ ಹೊರಬಂದಿದ್ದಾರೆ. ಜೈಲಿನ ಹೊರಗೆ ನಳಿನಿಯ ಸಂಬಂಧಿಯೊಬ್ಬರು ಆಕೆಯನ್ನು ಬರಮಾಡಿಕೊಂಡಿದ್ದಾರೆ. ನಳಿನಿ ತಮ್ಮ ಪುತ್ರಿಯ ವಿವಾಹಕ್ಕಾಗಿ 30 ದಿನಗಳ ಪೆರೋಲ್ ಮೇಲೆ ವೆಲ್ಲೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಈ ಹಿಂದೆ ನಳಿನಿ ತಮ್ಮ ಪುತ್ರಿಯ ವಿವಾಹದ ತಯಾರಿಗೆ 6 ತಿಂಗಳ ಪೆರೋಲ್ ನೀಡುವಂತೆ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ಜುಲೈ 5ರಂದು ವಿಚಾರಣೆ ನಡೆಸಿತ್ತು.
ಪ್ರತಿಯೊಬ್ಬ ಕೈದಿಗೆ 2 ವರ್ಷಗಳ ಅವಧಿಯಲ್ಲಿ ಒಂದು ತಿಂಗಳು ಪೆರೋಲ್ ಸಿಗುತ್ತದೆ. ಆದರೆ ನನಗೆ ಮಾತ್ರ 27 ವರ್ಷಗಳಿಂದ ಒಮ್ಮೆಯೂ ಪೆರೋಲ್ ಸಿಕ್ಕಿಲ್ಲ ಹೀಗಾಗಿ ಪುತ್ರಿಯ ವಿವಾಹದ ತಯಾರಿಗಾಗಿ ಆರು ತಿಂಗಳು ಪೆರೋಲ್ ನೀಡಬೇಕು ಎಂದು ಕೋರ್ಟ್ ನಲ್ಲಿ ವಾದಿಸಿದ್ದರು.
ಪತಿ-ಪತ್ನಿ ಇಬ್ಬರೂ ಜೈಲಿನಲ್ಲಿದ್ದೇವೆ. ನನಗೆ ನನ್ನ ಮಗಳನ್ನು ಸಾಕುವ ಅವಕಾಶವೇ ಸಿಗಲಿಲ್ಲ. ಮದುವೆಗೆ 30 ದಿನ ಸಾಕಾಗುವುದಿಲ್ಲ. 6 ತಿಂಗಳ ಪೆರೋಲ್ ನೀಡಿ ಎಂದು ನ್ಯಾಯಾಲಯವನ್ನು ನಳಿನಿ ಕೋರಿದ್ದರು. ಆದರೆದರೆ ನ್ಯಾಯಾಲಯ ಅವರಿಗೆ 30 ದಿನಗಳ ಕಾಲಾವಕಾಶ ನೀಡಿದೆ.
ರಾಜೀವ್ ಗಾಂಧಿ ಹಂತಕಿ ನಳಿನಿ 28 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದು ಪೆರೋಲ್ನಿಂದ ಹೊರಬರುವುದು ಇದೇ ಪ್ರಥಮವಾಗಿದೆ. ಇದಕ್ಕೂ ಮುಂಚೆ ನಳಿನಿ ತಂದೆ ಮೃತಪಟ್ಟಾಗ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಕೆಗೆ 2016 ರಲ್ಲಿ 12 ಗಂಟೆಗಳ ಪೆರೋಲ್ ನೀಡಲಾಗಿತ್ತು.
ನಳಿನಿ ಪುತ್ರಿ ಲಂಡನ್ ನಲ್ಲಿ ಮೆಡಿಸಿನ್ ಶಿಕ್ಷಣವನ್ನು ಪಡೆದಿದ್ದಾರೆ. ವೆಲ್ಲೂರಿನಲ್ಲಿ ಇವರ ವಿವಾಹ ಸರಳವಾಗಿ ನೆರವೇರಲಿದೆ ಎಂದು ತಿಳಿದುಬಂದಿದೆ.ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಗೆ ಗಲ್ಲುಶಿಕ್ಷೆಯನ್ನು ಕೋರ್ಟ್ ವಿಧಿಸಿತ್ತು. ಆದರೆ ಸೋನಿಯಾ ಗಾಂಧಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರು. ಆ ಬಳಿಕ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಕೋರ್ಟ್ ತೀರ್ಪು ನೀಡಿತ್ತು. ತದನಂತರ ನಳಿನಿ ಜೈಲಿನಲ್ಲಿಯೇ ಮಗಳಿಗೆ ಜನ್ಮ ನೀಡಿದ್ದಳು.