ಗುಜರಾತ್, ಜು 25 (Daijiworld News/RD): ಮಹಿಳಾ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಠಾಣೆಯೊಳಗೆ ಟಿಕ್ಟಾಕ್ ವಿಡಿಯೋ ಒಂದಕ್ಕೆ ಹೆಜ್ಜೆ ಹಾಕಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಗಮನಿದ ಅಧಿಕಾರಿಗಳು ಅವರನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.
ಅಮಾನತುಗೊಂಡ ಮಹಿಳಾ ಪೊಲೀಸ್ ಪೇದೆ ಅರ್ಪಿತಾ ಚೌಧರಿಯಾಗಿದ್ದು, 2016 ರಲ್ಲಿ ಪೊಲೀಸರ ಲೋಕ ರಕ್ಷಕ ದಳಕ್ಕೆ ನೇಮಕಗೊಂಡಿದ್ದರು. ನಂತರ 2018 ರಲ್ಲಿ ಮೆಹ್ಸಾನಾ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು.
ಅರ್ಪಿತಾ ಚೌಧರಿ ಮೆಹ್ಸಾನಾ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯಲ್ಲಿ ಲಾಪಕ್ ಮುಂದೆ ನಿಂತು ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿ ಈ ವಿಡಿಯೋವನ್ನು ಜುಲೈ 20 ರಂದು ರೆಕಾರ್ಡ್ ಮಾಡಿದ್ದರು. ನಂತರ ಅದನ್ನು ವಾಟ್ಸಪ್ನಲ್ಲಿ ಅಪ್ಲೋಡ್ ಮಾಡಿದ್ದರು, ಅಪ್ಲೋಡ್ ಮಾಡಿದ ಅರೆಗಳಿಗೆಯಲ್ಲಿ ವೈರಲ್ ಆದ ಈ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅರ್ಪಿತಾ ಚೌಧರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕರ್ತವ್ಯದಲ್ಲಿದ್ದಾಗ ಅವರು ಸಮವಸ್ತ್ರ ಧರಿಸದೆ ಲಂಗ್ನಾಜ್ ಗ್ರಾಮ ಪೊಲೀಸ್ ಠಾಣೆಯೊಳಗೆ ಡ್ಯಾನ್ಸ್ ಮಾಡಿದ್ದು, ಟಿಕ್ಟಾಕ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯಾದವರು ಶಿಸ್ತನ್ನು ಅನುಸರಿಸಬೇಕು. ಆದರೆ ಅರ್ಪಿತಾ ಅವರು ಶಿಸ್ತನ್ನು ಪಾಲಿಸಲಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಅಧೀಕ್ಷಕ ಪೊಲೀಸ್ ಮಂಜಿತಾ ವಂಜಾರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.