ಬೆಂಗಳೂರು, ಜು25(Daijiworld News/SS): ಏನೇ ಮಾಡಿದರೂ ಕೊನೆಗೆ ಸತ್ಯವೇ ಗೆಲ್ಲುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
"ಸಿದ್ದರಾಮಯ್ಯನವರು ನಮ್ಮ ನಾಯಕರು. ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು" ಎಂದು ಕೆಲವು ಅತೃಪ್ತ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೂಡಾ ನನ್ನ ಮೇಲೆ ಸುಳ್ಳು ಆರೋಪಗಳ ಸುರಿ ಮಳೆ ಆಗಿವೆ. ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದಲ್ಲ. ಬಹುಶ: ಕೊನೆಯದೂ ಅಲ್ಲ. ಇಂತಹ ಸುಳ್ಳು ಆರೋಪಗಳ ವಿಷ ಕುಡಿದು, ಕುಡಿದು ನಾನು ವಿಷಕಂಠನಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯನವರು ನಮ್ಮ ನಾಯಕರು ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಅವರು ನೀಡದೆ ಇದ್ದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೆ ಇದರ ಹಿಂದೆ ಯಾರೋ ಸಂಚುಕೋರರು ಇದ್ದಾರೆಂದು ಅರ್ಥ. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ. ಕೊನೆಗೆ ಸತ್ಯವೇ ಗೆಲ್ಲುವುದು. ಸತ್ಯಮೇವ ಜಯತೇ ಎಂದು ಹೇಳಿದ್ದಾರೆ.