ಬೆಂಗಳೂರು, ಜು25(Daijiworld News/SS): ನಾನು ರಾಜೀನಾಮೆ ನೀಡಿರುವವರನ್ನು ಅತೃಪ್ತರು ಎನ್ನುವುದಿಲ್ಲ. ಅವರು ಸಂತೃಪ್ತರು ಎಂದು ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ನೀಡಿರುವವರನ್ನು ಅತೃಪ್ತರು ಎನ್ನುವುದಿಲ್ಲ. ಅವರು ಸಂತೃಪ್ತರು. ಇದನ್ನು ನಾನು ಸದನದಲ್ಲಿಯೂ ಹೇಳಿದ್ದೇನೆ. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುವಾಗ ನಮ್ಮ ಶಾಸಕರಿಗೂ ಪ್ರಮಾಣ ವಚನ ಆಗಬೇಕು. ಇಲ್ಲದಿದ್ದರೆ ಅವರು ಸುಮ್ಮನೆ ಬಿಡುತ್ತಾರಾ..?. ಸಾಕಿ, ಸಲುಹಿದ ನಮ್ಮನ್ನೇ ಬಿಡಲಿಲ್ಲ. ಅವರ ಕ್ಷೇತ್ರದ ಜನರ ಸಂಕಟ ಎಷ್ಟಿದೆಯೋ..?. ಅವರನ್ನು ಆಯ್ಕೆ ಮಾಡಲು ಹಗಲು ಇರುಳು ಶ್ರಮಿಸಿದ ಕಾರ್ಯಕರ್ತರನ್ನು ಕೇಳಲಿಲ್ಲ. ಇನ್ನು ಯಡಿಯೂರಪ್ಪರನ್ನು ಬಿಡುತ್ತಾರ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಅತೃಪ್ತ ಶಾಸಕರಿಗೆ ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೆ ಯಡಿಯೂರಪ್ಪ ಅವರನ್ನು ಹರಿದು, ಹರಿದು ನುಂಗಿ ಬಿಡುತ್ತಾರೆ. ಹೀಗಾಗಿ ಬಿಎಸ್ವೈ ಪ್ರಮಾಣ ವಚನ ಸ್ವೀಕರಿಸುವಾಗ ಮಹೇಶ್ ಕುಮಟಳ್ಳಿ ಒಬ್ಬ ಬಿಟ್ಟು ಉಳಿದ ತೃಪ್ತ ಶಾಸಕರಿಗೆ ಪ್ರಮಾಣ ವಚನ ನೀಡಲೇಬೇಕು. ಇಲ್ಲವಾದಲ್ಲಿ ಯಾರು ಯಡಿಯೂರಪ್ಪರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.
ಸಚಿವ ಸ್ಥಾನ ಕೊಡದಿದ್ದರೆ ಎಲ್ಲರೂ ಸೇರಿ ಯಡಿಯೂರಪ್ಪ ಅವರ ಪ್ಯಾಂಟ್ ಮತ್ತು ಶರ್ಟ್ ಅನ್ನು ಹರಿದುಬಿಡುತ್ತಾರೆ. ಜೇಬ್ ಒಬ್ಬ, ಪ್ಯಾಂಟ್ ಒಬ್ಬ ಹಾಗೂ ಶರ್ಟ್ ಒಬ್ಬ ಕಿತ್ತುಕೊಂಡು ಕೊನೆಯಲ್ಲಿ ಬಿಎಸ್ವೈ ಸುತ್ತ ಇರುವ ಮುತ್ತು ರತ್ನಗಳನ್ನೆಲ್ಲಾ ಕಿತ್ತುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ಒಬ್ಬನಿಗೆ ಬೆಂಗಳೂರು ನಗರ, ಒಬ್ಬನಿಗೆ ಇಂಧನ ಇಲಾಖೆ, ಒಬ್ಬನಿಗೆ ಲೋಕೋಪಯೋಗಿ ಇಲಾಖೆ ಹಾಗೂ ಇನ್ನೊಬ್ಬನಿಗೆ ಜಲಸಂಪನ್ಮೂಲ ಇಲಾಖೆ ಬೇಕಾಗಿದೆ. ಎಲ್ಲರಿಗೂ ಸರಿಯಾಗಿ ಹಂಚಿಕೆ ಮಾಡಬೇಕು. ನನ್ನ ಬಳಿ ಪಟ್ಟಿಯಿದೆ. ನನ್ನ ಬಳಿ ಮಾತನಾಡಿದ್ದಾರೆ. ಮುಂದೆ ಸದನದಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ಜತೆಗೆ ಬಿಎಸ್ವೈ ಅವರು ಪ್ರಮಾಣ ವಚನ ಸ್ವೀಕರಿಸಿದರೆ, ಬದುಕುತ್ತಾರೆ. ಇಲ್ಲವಾದರೆ ಯಡಿಯೂರಪ್ಪ ಕತೆ ಗೋವಿಂದ, ಗೋವಿಂದಾ ಎಂದು ತಿಳಿಸಿದರು.