ಬೆಂಗಳೂರು, ಜು25(Daijiworld News/SS): ರಾಜ್ಯದ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರಿಗೂ ಸುಭದ್ರ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರಿಗೂ ಸುಭದ್ರ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಮುಂದಿನ ಎರಡು ಮೂರು ವರ್ಷಗಳಲ್ಲಿ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇರುವುದರಿಂದ ಸುಭದ್ರ ಆಡಳಿತ ನೀಡಲು ಸಾಧ್ಯವಿಲ್ಲ. ಉಪ ಚುನಾವಣೆ ಕಡೆಗೆ ಗಮನ ಹರಿಸಬೇಕಾಗುತ್ತದೆ. ಮತ್ತೊಂದೆಡೆ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾಗುತ್ತದೆ. ಹೀಗಾಗಿ ಸ್ಥಿರ ಸರ್ಕಾರ ಇರುವುದು ಅನುಮಾನ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಹೆಚ್ಚಾಗಿ ರಾಜ್ಯದಲ್ಲಿ ನಡೆದ 10-20 ದಿನಗಳ ರಾಜಕೀಯ ಬೆಳವಣಿಗೆಯ ಸಂದರ್ಭದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ತಾವು, ಎಚ್.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್ ನಾಯಕರು ಮನವಿ ಮಾಡಿ ಅವರ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಿದ್ದೆವು. ಅದರಂತೆ ಅವರು ನಮ್ಮ ಮೇಲೆ ವಿಶ್ವಾಸ ವಿಟ್ಟು ರಾಜೀನಾಮೆಯನ್ನು ವಾಪಸ್ ಪಡೆದು, ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ. ಈ ಮೂಲಕ ತಾವು ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ವೈಯಕ್ತಿಕ ನೆಲೆಯಲ್ಲಿ ಗೌರವ ಸಲ್ಲಿಸಲು ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೇನೆ. ವಿಧಾನಸಭೆಯ ಅಧಿವೇಶನದಲ್ಲೇ ಅವರನ್ನು ನೆನಪಿಸಿಕೊಳ್ಳಬೇಕಿತ್ತು. ಆದರೆ ಅಲ್ಲಿ ಸಮಯಾವಕಾಶದ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಅವರ ಮನೆಗೆ ಬಂದಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಸುದ್ದಿಗಾರರು ಬಿಜೆಪಿ ನಾಯಕರು ಇನ್ನೂ ಸರ್ಕಾರ ರಚನೆಗೆ ಮುಂದಾಗದ ಬಗ್ಗೆ ಪ್ರಶ್ನಿಸಿದಾಗ, ಅದು ಆ ಪಕ್ಷಕ್ಕೆ ಸೇರಿದ ವಿಚಾರ ಎಂದಷ್ಟೇ ಉತ್ತರಿಸಿದ್ದಾರೆ.