ಹರಿಯಾಣ, ಫೆ. 06 (DaijiworldNews/AA): ಛಲವೊಂದಿದ್ದರೆ ಎಂತಹ ಕಷ್ಟಗಳನ್ನೂ ಮೆಟ್ಟಿ ನಿಂತು ಕನಸನ್ನು ನನಸು ಮಾಡಿಕೊಳ್ಳಬಹುದು ಎಂಬುದಕ್ಕೆ 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಶಿವಾನಿ ಪಾಂಚಾಲ್ ಅವರ ಯಶೋಗಾಥೆ ಇದು.

ಹರಿಯಾಣದ ಮಾಜ್ರಿ ಗ್ರಾಮದವರಾದ ಶಿವಾನಿ, ನಾಲ್ಕು ವರ್ಷದವರಿದ್ದಾಗಲೇ ರಸ್ತೆ ಅಪಘಾತವೊಂದರಲ್ಲಿ ತಂದೆ ದಿಲ್ಬಾಗ್ ಸಿಂಗ್ ಅವರನ್ನು ಕಳೆದುಕೊಂಡರು. ಕುಟುಂಬದ ಆಧಾರಸ್ತಂಭವಾಗಿದ್ದ ತಂದೆಯ ನಿಧನದ ನಂತರ, ಅಂಗನವಾಡಿ ಕಾರ್ಯಕರ್ತೆಯಾಗಿದ್ದ ತಾಯಿ ಸವಿತಾ ಅವರು ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡರು.
ಶಿವಾನಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಜ್ರಿ ಗ್ರಾಮದ ಬಾಲ ವಿಕಾಸ್ ಪಬ್ಲಿಕ್ ಶಾಲೆಯಲ್ಲಿ ಪೂರೈಸಿದರು. ಬಾಲ್ಯದಿಂದಲೇ ಓದಿನಲ್ಲಿ ಮುಂದಿದ್ದ ಅವರು, ಮುಂದೆ ಕುರುಕ್ಷೇತ್ರದ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಪಡೆದರು. ಪದವಿಯ ನಂತರ ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಕ್ಕೆ ಸೇರಿದರು. ಆದರೆ ಯುಪಿಎಸ್ಸಿ ಪರೀಕ್ಷೆ ಬರೆಯುವ ಆಕಾಂಕ್ಷೆ ಹೊಂದಿದ್ದ ಶಿವಾನಿ ಪರೀಕ್ಷೆ ಬರೆಯಲು ನಿರ್ಧರಿಸಿದರು.
ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ ಶಿವಾನಿ ಅವರು, ದೇಶದ ಅತ್ಯಂತ ಕಠಿಣ ಪರೀಕ್ಷೆಯನ್ನು ಎದುರಿಸಲು ನಿರ್ಧರಿಸಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಯಾವುದೇ ಕೋಚಿಂಗ್ ಸೆಂಟರ್ಗೆ ಸೇರದೆ, ಕೇವಲ ಸ್ವಯಂ ಅಧ್ಯಯನ ಮತ್ತು ಶಿಸ್ತಿನಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದರು. 2024ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಬಾರಿಗೆ ಬರೆದ ಶಿವಾನಿ ಅವರು, 53ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.