ನವದೆಹಲಿ, ಫೆ. 06 (DaijiworldNews/AK): ನವಜೋತ್ ಕೌರ್ ಸಿಧು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಮತ್ತು ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಘೋಷಿಸಿದ್ದಾರೆ.

ಪಕ್ಷದ ಶಿಸ್ತು ಎಲ್ಲಕ್ಕಿಂತ ಮುಖ್ಯ. ಕಾಂಗ್ರೆಸ್ ಹಾಕಿದ ಗೆರೆ ದಾಟುವವರು, ಪಕ್ಷದ ವಿರುದ್ಧ ಕೆಲಸ ಮಾಡುವ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದ ನವಜೋತ್ ಸಿಂಗ್ ಸಿಧು ಅವರ ಪತ್ನಿಯಾಗಿರುವ ನವಜೋತ್ ಕೌರ್ ಸಿಧು ಕಾಂಗ್ರೆಸ್ ಪಕ್ಷ ತೊರೆದ ಕೆಲವು ದಿನಗಳ ನಂತರ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ನವಜೋತ್ ಕೌರ್ ಸಿಧು ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದಿದ್ದರು ಎಂದು ಆರೋಪಿಸಲಾಗಿದೆ. ಪಕ್ಷದ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದೆ, ನವಜೋತ್ ಕೌರ್ ಸಿಧು ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ನಂತರ ಅವರ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಈ ಹಿಂದೆ “ಪಂಜಾಬ್ ಮುಖ್ಯಮಂತ್ರಿಯಾಗಲು 500 ಕೋಟಿ ರೂ. ಸೂಟ್ಕೇಸ್ ನೀಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು.
ಇದೀಗ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನ ಉಚ್ಚಾಟಿಸಲಾಗಿದೆ. ಇದರ ನಡುವೆ ನವಜೋತ್ ಸಿಂಗ್ ಸಿಧು ಹಾಗೂ ನವಜೋತ್ ಕೌರ್ ಸಿಧು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳಿವೆ. ಆದರೆ, ಈ ಬಗ್ಗೆ ನವಜೋತ್ ಸಿಂಗ್ ಸಿಧು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.