ನಾಗೌರ್, ಫೆ. 08 (DaijiworldNews/AA): ಪಾರಿವಾಳದೊಂದು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಚ್ಚಿಕೊಂಡು ಪರಾರಿಯಾದ ಘಟನೆ ರಾಜಸ್ಥಾನದ ನಾಗೌರ್ನ ದೇಗಾನಾದ ಚಿನ್ನದ ಮಾರುಕಟ್ಟೆಯಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ನಡೆದಿದೆ.

ದೇಗಾನಾ ಬುಲಿಯನ್ ಮಾರ್ಕೆಟ್ನಲ್ಲಿರುವ ಚಿನ್ನಾಭರಣ ಮಳಿಗೆಯೊಂದರ ಮೇಲಿನ ಮಹಡಿಯಲ್ಲಿ ಕುಶಲಕರ್ಮಿಗಳು ಚಿನ್ನದ ಆಭರಣಗಳನ್ನು ತಯಾರಿಸುತ್ತಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಅಂಗಡಿಯೊಳಗೆ ನುಗ್ಗಿದ ಪಾರಿವಾಳವೊಂದು, ಅಲ್ಲಿಯೇ ಇದ್ದ ಹೊಸದಾಗಿ ತಯಾರಿಸಿದ ಚಿನ್ನದ ಸರವನ್ನು ತನ್ನ ಕೊಕ್ಕಿನಿಂದ ಕಚ್ಚಿಕೊಂಡು ಹಾರಿಹೋಗಿದೆ.
ಅಂಗಡಿಯವರು ಪಾರಿವಾಳವನ್ನು ಹಿಂಬಾಲಿಸಿದ್ದಾರೆ. ಪಾರಿವಾಳವು ಮಾರುಕಟ್ಟೆಯ ಛಾವಣಿಯ ಮೇಲೆ ಇಳಿದು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಕುಳಿತಿತ್ತು. ಈ ವೇಳೆ ಹಕ್ಕಿ ಅದರ ಕುತ್ತಿಗೆಯನ್ನು ಅಲ್ಲಾಡಿಸಿದ್ದು, ಚಿನ್ನದ ಸರ ಅದರ ಕುತ್ತಿಗೆಗೆ ಸುತ್ತಿಕೊಂಡಿದೆ.
ಕೆಲವು ನಿಮಿಷಗಳ ನಂತರ ಪಾರಿವಾಳದಿಂದ ಚಿನ್ನದ ಸರವು ಜಾರಿ ಛಾವಣಿಯ ಮೇಲೆ ಬಿತ್ತು. ಕೂಡಲೇ ಅಂಗಡಿಯ ಸಿಬ್ಬಂದಿ ಅಲ್ಲಿಗೆ ಧಾವಿಸಿ ಆಭರಣವನ್ನು ಸುರಕ್ಷಿತವಾಗಿ ಪಡೆದುಕೊಂಡಿದ್ದಾರೆ.