ಮೀರತ್, ಫೆ. 09 (DaijiworldNews/TA): ಆನ್ಲೈನ್ ಗೇಮಿಂಗ್ ಒಂದು ಭಯಾನಕ ಪಿಡುಗಾಗಿ ಪರಿಣಮಿಸುತ್ತಿರುವುದಕ್ಕೆ ಮೀರತ್ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಗಾಜಿಯಾಬಾದ್ನಲ್ಲಿ ಮೊಬೈಲ್ ಗೇಮಿಂಗ್ ವ್ಯಸನದಿಂದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬೆನ್ನಲ್ಲೇ, ಇದೀಗ ಮೀರತ್ನ ಖೈರ್ನಗರ ಪ್ರದೇಶದಲ್ಲಿ ಪಬ್ಜಿ ವ್ಯಸನ 22 ವರ್ಷದ ಯುವಕನ ಜೀವವನ್ನೇ ಬಲಿ ಪಡೆದಿದೆ.

ಮೀರತ್ನ ಖೈರ್ನಗರದ ಗುಲಾರ್ ವಾಲಿ ಗಾಲಿ ನಿವಾಸಿ ಫಾರೂಕ್ ಅವರ ಏಕೈಕ ಪುತ್ರ ಮೊಹಮ್ಮದ್ ಕೈಫ್ (22) ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ ನಾಲ್ಕು ತಿಂಗಳಿಂದ ಕೈಫ್ ಆನ್ಲೈನ್ ಗೇಮಿಂಗ್ಗೆ ಸಂಪೂರ್ಣವಾಗಿ ಅಂಟಿಕೊಂಡಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಗಲು-ರಾತ್ರಿ ಎನ್ನದೇ ಮೊಬೈಲ್ ಫೋನ್ನಲ್ಲೇ ಆಟ ಆಡುತ್ತಿದ್ದ ಅವನು, ಶುಕ್ರವಾರ ತಡರಾತ್ರಿ ಕೂಡ ತನ್ನ ಕೋಣೆಯಲ್ಲಿ ಹೆಡ್ಫೋನ್ ಹಾಕಿಕೊಂಡು PUBG ಆಟದಲ್ಲಿ ತೊಡಗಿದ್ದ.
ರಾತ್ರಿ ಸುಮಾರು 3 ಗಂಟೆ ವೇಳೆಗೆ ಆಟ ಆಡುತ್ತಿರುವಾಗಲೇ ಕೈಫ್ ಏಕಾಏಕಿ ಅಸ್ವಸ್ಥಗೊಂಡು ಹಾಸಿಗೆಯಿಂದ ಕೆಳಗೆ ಬಿದ್ದಿದ್ದಾನೆ. ಶಬ್ದ ಕೇಳಿ ಕೋಣೆಗೆ ಧಾವಿಸಿದ ಕುಟುಂಬ ಸದಸ್ಯರು, ಕೈಫ್ನ ಸ್ಥಿತಿ ಗಂಭೀರವಾಗಿರುವುದನ್ನು ಕಂಡು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಕೈಫ್ನ ರಕ್ತದೊತ್ತಡ 300 ಕ್ಕಿಂತ ಹೆಚ್ಚಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ತಕ್ಷಣ ದೆಹಲಿಗೆ ರೆಫರ್ ಮಾಡುವಂತೆ ವೈದ್ಯರು ಸೂಚಿಸಿದರು.
ದೆಹಲಿಯ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಕೈಫ್, ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ವೈದ್ಯರ ಮಾಹಿತಿ ಪ್ರಕಾರ, ಅತಿಯಾದ ಮಾನಸಿಕ ಒತ್ತಡ ಮತ್ತು ಉತ್ಸಾಹದಿಂದ ರಕ್ತದೊತ್ತಡ ತೀವ್ರವಾಗಿ ಏರಿಕೆಯಾಗಿ, ಮೆದುಳಿನಲ್ಲಿ ರಕ್ತಸ್ರಾವ ಸಂಭವಿಸಿದ್ದು, ಇದೇ ಸಾವಿಗೆ ಕಾರಣವಾಗಿದೆ.
ಕೈಫ್ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಗಳನ್ನು ಮಾಡುವುದರಲ್ಲಿ ಆಸಕ್ತಿ ಹೊಂದಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಸಂಪೂರ್ಣವಾಗಿ ಆನ್ಲೈನ್ ಗೇಮಿಂಗ್ಗೆ ದಾಸನಾಗಿದ್ದ. ಕುಟುಂಬದವರು ಪದೇಪದೇ ಎಚ್ಚರಿಕೆ ನೀಡಿದರೂ, ಆತ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕುಟುಂಬಸ್ಥರು ನೋವಿನಿಂದ ಹೇಳಿದ್ದಾರೆ.
ಮನಃಶಾಸ್ತ್ರಜ್ಞರ ಪ್ರಕಾರ, ಆನ್ಲೈನ್ ಆಟಗಳು ಯುವಕರ ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಅತಿಯಾಗಿ ಹೆಚ್ಚಿಸಿ ವ್ಯಸನಕ್ಕೆ ಕಾರಣವಾಗುತ್ತವೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.