ನವದೆಹಲಿ, ಜು26(Daijiworld News/SS): ಪಾಕಿಸ್ತಾನದಲ್ಲಿ ಈಗಲೂ 30 ರಿಂದ 40 ಸಾವಿರ ಶಸ್ತ್ರ ಸಜ್ಜಿತ ಉಗ್ರರು ಸಕ್ರಿಯರಾಗಿದ್ದಾರೆ. ನೆರೆಯ ಕಾಶ್ಮೀರ ಅಥವಾ ಅಪ್ಘಾನಿಸ್ತಾನದ ಕೆಲವು ಕಡೆಗಳಲ್ಲಿ ಅವರೆಲ್ಲ ತರಬೇತಿ ಪಡೆದು ಹೋರಾಟ ನಡೆಸುತ್ತಿದ್ದಾರೆ. ಈ ಉಗ್ರರ ಗುಂಪಿನ ಬಗ್ಗೆ ಹಿಂದಿನ ಸರ್ಕಾರ ಅಮೆರಿಕಾಕ್ಕೆ ಸತ್ಯ ಹೇಳಿರಲಿಲ್ಲ ಎಂದು ಇಮ್ರಾನ್ ಖಾನ್ ಅಮೆರಿಕಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನದ ನಾಯಕರು ಸ್ಪಷ್ಟವಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಈಗಲಾದರೂ ತನ್ನ ನೆಲೆಯಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೋರಿದ್ದರು ಎಂಬ ಹೇಳಿಕೆಯನ್ನು ಅಲ್ಲಗಳೆದ ರವೀಶ್ ಕುಮಾರ್, ಭಾರತ ಮತ್ತು ಅಮೆರಿಕಾ ನಡುವಣ ಸಂಬಂಧ ಸದೃಢವಾಗಿರುವುದಾಗಿ ತಿಳಿಸಿದರು.
ಪಾಕಿಸ್ತಾನದಲ್ಲಿ ಈಗಲೂ ಸುಮಾರು 30ರಿಂದ 40 ಸಾವಿರ ಉಗ್ರರಿದ್ದಾರೆ ಎಂದು ಆ ದೇಶದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿಕೆ ನೀಡಿರುವುದು ಸ್ಪಷ್ಟ ತಪ್ಪೊಪ್ಪಿಗೆಯಾಗಿದೆ. ಉಗ್ರರ ವಿರುದ್ಧ ಪಾಕಿಸ್ತಾನ ವಿಶ್ವಾಸಾರ್ಹ ಹಾಗೂ ಕಠಿಣ ಕ್ರಮ ಕೈಗೊಳ್ಳುವ ಸಮಯ ಇದಾಗಿದೆ ಎಂದು ಭಾರತ ಪ್ರತಿಕ್ರಿಯಿಸಿದೆ.