ನವದೆಹಲಿ, ಜು 26(Daijiworld News/RD): ಭಾರತೀಯ ಸೈನಿಕರ ಶೌರ್ಯ, ಪರಾಕ್ರಮವನ್ನು ವಿಶ್ವಕ್ಕೆ ಪರಿಚಯಿಸಿದ ದಿನ ಜುಲೈ 26 ಆಗಿದ್ದು, ವೀರ ಸೈನಿಕರ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಕೊಳ್ಳುವುದರ ಜೊತೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ ದಿನದ ಸಂಭ್ರಮಚರಣೆ ಮನೆಮಾಡಿದೆ. ಭಾರತೀಯ ಯೋಧರು ತಮ್ಮ ಪ್ರಾಣವನ್ನೇ ಪಣಕಿಟ್ಟು, ಶೌರ್ಯ, ತ್ಯಾಗ ಬಲಿದಾನದವನ್ನು ನೆನಪಿಸಿ ನಮನ ಸಲ್ಲಿಸುವ ಗೌರವ ದಿನವಾಗಿದ್ದು, ದೇಶದಾದ್ಯಂತ ಇಂದು 20 ನೇ ವರ್ಷದ ಕಾರ್ಗಿಲ್ ವಿಜಯೋತ್ಸವನ್ನು ಆಚರಿಸುತ್ತಿದೆ.
ಇತಿಹಾಸದಲ್ಲಿ 1999 ರ ಜುಲೈ 26 ಎಂಬುವುದು ಮಹತ್ವದ ದಿನವಾಗಿದೆ. ಭಾರತದ ಗಡಿಭಾಗದಲ್ಲಿ ಕಾರ್ಗಿಲ್, ದಾಸ್ ತೊಲೊಲಿಂಗ್, ಬಟಾಲಿಕ್, ಟರ್ಟೋಕ್ ವಲಯಗಳಲ್ಲಿ ಅಕ್ರಮವಾಗಿ ದೇಶದೊಳಗೆ ನುಸುಳಿದ ಪಾಕಿಸ್ತಾನಿ ಸೈನ್ಯಪಡೆಯನ್ನು ಸದೆಬಡಿಯುವ ಮೂಲಕ ಕಾರ್ಗಿಲ್ ಬೆಟ್ಟಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ.
ಈ ಒಂದು ಸಂಭ್ರಮದ ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಕಾರ್ಗಿಲ್ಗೆ ಭೇಟಿ ನೀಡಿ, ಅಲ್ಲಿನ ಯೋಧರ ಜೊತೆ ಕಳೆದ ಕ್ಷಣವನ್ನು ಮರೆಯಲು ಅಸಾಧ್ಯ ಎಂದು ಯೋಧರೊಂದಿಗೆ ಕಳೆದ ಕ್ಷಣದ ಕೆಲವು ವಿಶೇಷ ಫೋಟೋಗಳ ಜೊತೆ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದೇಶದೆಲ್ಲೆಡೆ ಸಂಭ್ರಮಾಚರಣೆ ಮನೆ ಮಾಡಿದ್ದು, ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಪಡೆದಿರುವ ಧೋನಿ, ಎರಡು ದಿನಗಳ ಕಾರ್ಗಿಲ್ ವಿಜಯ ದಿನವನ್ನು ಆಚರಿಸುವ ನಿಟ್ಟಿನಲ್ಲಿ ಕಾಶ್ಮೀರದ ಗಡಿಯಲ್ಲಿ ಸೇನಾ ಸಮವಸ್ತ್ರ ಧರಿಸಿ ಸೇನೆಯ ಜೊತೆ ಇರಲಿದ್ದಾರೆ. 2011ರಲ್ಲಿ ಭಾರತಕ್ಕೆ ವಿಶ್ವ ಕಪ್ನ್ನು ಗೆದ್ದುಕೊಂಡ ಬಳಿಕ ಭಾರತೀಯ ಸೇನೆಯು ಪ್ರಾದೇಶಿಕ ಸೇನೆ (ಟೆರಿಟೋರಿಯಲ್ ಆರ್ಮಿ)ಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿತ್ತು. ಭಾರತೀಯ ಸೇನೆಯಲ್ಲಿ ಅಲ್ಪಾವಧಿಗೆ ಸೇವೆ ಸಲ್ಲಿಸಲು ಧೋನಿ ಮುಂದಾಗಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಅವರ ಅಪಾರ ಆಸಕ್ತಿಗೆ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿನ 106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್(ಪ್ಯಾರಾ)ಯಲ್ಲಿ ಅವಕಾಶ ನೀಡಲಾಗಿದೆ.
ಕಾರ್ಗಿಲ್ ಯುದ್ಧದಲ್ಲಿ 600 ಕ್ಕೂ ಅಧಿಕ ಭಾರತೀಯ ವೀರ ಸೈನಿಕರು ಹುತಾತ್ಮರಾಗಿ, 1200 ಕ್ಕೂ ಹೆಚ್ಚು ಮಂದಿ ಅಂಗವಿಕಲರಾಗಿದ್ದರು. ಹೀಗಾಗಿ ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಕಾರ್ಗಿಲ್ ವಿಜಯ್ ದಿವಸ್ ಅನ್ನು ಜುಲೈ 26ರಂದು ಸೇನೆ ಆಚರಿಸುತ್ತಾ ಬಂದಿದೆ.