ಬೆಂಗಳೂರು, ಫೆ. 10 (DaijiworldNews/TA): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಾವು ಏನು ಮಾತನಾಡಿದ್ದೇವೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ. ನಾವು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗೊಂದಲ ಬೇರೆಯವರಿಗೆ ಇರಬಹುದು, ಆದರೆ ನನಗೆ ಯಾವುದೇ ಗೊಂದಲವಿಲ್ಲ ಎಂದು ಅವರು ಖಡಕ್ವಾಗಿ ಸ್ಪಷ್ಟಪಡಿಸಿದರು.

ದೆಹಲಿಗೆ ತೆರಳುವ ಮುನ್ನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಮ್ಮ ನಡುವೆ ಹಾಗೂ ಪಕ್ಷದ ವರಿಷ್ಠರೊಂದಿಗೆ ಎಲ್ಲ ವಿಚಾರಗಳನ್ನೂ ಚರ್ಚಿಸಲಾಗಿದೆ ಎಂದು ಹೇಳಿದರು. ಇಂತಹ ವಿಚಾರಗಳಲ್ಲಿ ಬೇರೆಯವರು ಟೆನ್ಶನ್ ತೆಗೆದುಕೊಳ್ಳುವುದರಿಂದಾಗಲಿ ಅಥವಾ ಹೇಳಿಕೆಗಳನ್ನು ನೀಡುವುದರಿಂದಾಗಲಿ ಯಾರಿಗೂ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ನನ್ನ ಪರವಾಗಲಿ ಅಥವಾ ವಿರುದ್ಧವಾಗಲಿ ಶಾಸಕರು, ಸಚಿವರು ಹೇಳಿಕೆ ನೀಡಿದರೆ ಪಕ್ಷಕ್ಕೆ ಮಾತ್ರ ಹಾನಿಯಾಗುತ್ತದೆ ಎಂದು ಡಿಕೆಶಿ ಎಚ್ಚರಿಸಿದರು. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬಾಯಿ ಮುಚ್ಚಿಕೊಂಡು ಶಿಸ್ತು ಪಾಲಿಸಬೇಕು ಎಂದು ಸೂಚಿಸಿದ್ದಾರೆ. ಅದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಅಸ್ಸಾಂ ವಿಧಾನಸಭೆ ಚುನಾವಣೆ ವಿಚಾರವಾಗಿ ಇಂದು ಸಂಜೆ ಎಐಸಿಸಿ ನಾಯಕರು ಚರ್ಚೆ ನಡೆಸಲು ನನ್ನನ್ನು ಕರೆದಿದ್ದಾರೆ ಎಂದು ಡಿಕೆಶಿ ತಿಳಿಸಿದರು. ಕೇರಳ ಪ್ರವಾಸ ಮುಗಿಸಿಕೊಂಡಿದ್ದು, ಇದೀಗ ಅಸ್ಸಾಂಗೆ ತೆರಳಬೇಕಾಗಿದೆ ಎಂದರು.
ಬಜೆಟ್ ಸಭೆಗಳಿಗೆ ಗೈರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಜೆಟ್ ಸಭೆಗಳ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ ಎಂದು ಹೇಳಿದರು. ನಿನ್ನೆಯೂ ಬಜೆಟ್ ಸಭೆ ನಡೆದಿದೆ, ಮುಂದಿನ ಸಭೆಗಳನ್ನು ಸಿಎಂ ನಡೆಸುತ್ತಾರೆ. ದೆಹಲಿಯಿಂದ ವಾಪಸ್ ಬಂದ ಬಳಿಕ ಈ ಬಗ್ಗೆ ಮತ್ತಷ್ಟು ಚರ್ಚೆ ನಡೆಸುವುದಾಗಿ ತಿಳಿಸಿದರು.
ದೆಹಲಿಯಿಂದ ‘ಗುಡ್ ನ್ಯೂಸ್’ ತರ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಪ್ರತಿದಿನವೂ ನನಗೆ ಒಳ್ಳೆಯ ದಿನವೇ, ಅದೇ ರೀತಿ ಪ್ರತಿದಿನವೂ ಸವಾಲಿನ ದಿನವೂ ಹೌದು ಎಂದು ಮಾರ್ಮಿಕವಾಗಿ ಹೇಳಿದರು. ಯಾವುದೂ ಸುಲಭವಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಲು ಅನೇಕ ಕಷ್ಟಗಳು ಮತ್ತು ತೊಡಕುಗಳು ಎದುರಾಗುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ, ಅವುಗಳನ್ನು ಎದುರಿಸಿಕೊಂಡು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.
ಯತೀಂದ್ರ ಅವರಿಗೆ ಯಾಕೆ ನೋಟಿಸ್ ನೀಡಿಲ್ಲ ಎಂಬ ಸಚಿವ ಇಕ್ಬಾಲ್ ಹುಸೇನ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಆ ವಿಚಾರವನ್ನು ಹೈಕಮಾಂಡ್ ಬಳಿ ಕೇಳೋಣ ಎಂದು ಹೇಳಿ ದೆಹಲಿಗೆ ತೆರಳಿದರು.