ಬೆಂಗಳೂರು, ಜು 26 (Daijiworld News/MSP): ದೋಸ್ತಿ ಸರ್ಕಾರ ಪತನವಾದ ಹಿನ್ನೆಲೆ, ಬಿಎಸ್ ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ 10ಕ್ಕೆ ರಾಜಭವನಕ್ಕೆ ತೆರಳಲಿದ್ದು, ಇಂದು ಸಂಜೆ 6 ಗಂಟೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡ ಹಿನ್ನೆಲೆ ಕಳೆದ 3 ದಿನಗಳಿಂದ ಬಿಎಸ್ವೈ, ಪ್ರಮಾಣವಚನ ಸ್ವೀಕಾರಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದರು. ಆದರೆ ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಗುರುವಾರವಷ್ಟೇ ರಾಜ್ಯ ಬಿಜೆಪಿ ನಾಯಕರು ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ದೊರಕಿದ ಹಿನ್ನಲೆಯಲ್ಲಿ ಆತುರವಾಗಿ ಬಿಎಸ್ವೈ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಲಾಗಿದೆ.
ಇನ್ನು ರಾಜಭವನದಲ್ಲಿ ರಾಜ್ಯಪಾಲರ ಭೇಟಿಗೂ ಮುನ್ನ ಯಡಿಯೂರಪ್ಪ ತಮ್ಮ ನಿವಾಸದ ಬಳಿಯಿರುವ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್, ಕಾರ್ಕಳ ಶಾಸಕ ಸುನೀಲ್ ಕುಮಾರ್ , ಶಾಸಕ ರಘುಪತಿ ಭಟ್ ಮುಂತಾದವರು ಬಿ.ಎಸ್ ವೈ ಗೆ ಸಾಥ್ ನೀಡಿದರು.