ನವದೆಹಲಿ, ಜು26(Daijiworld News/SS): ಸಂಸತ್ತಿನ ನೂತನ ಸದಸ್ಯರು ಜೂನ್ 17 ರಂದು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಆರಂಭವಾದ 17ನೇ ಲೋಕಸಭೆಯ ಬಜೆಟ್ ಅಧಿವೇಶನ ಜುಲೈ 26 ರಂದು ಅಂತ್ಯಗೊಳ್ಳಬೇಕಿತ್ತು. ಆದರೆ, ಶೇ, 80 ರಷ್ಟು ವಿಧೇಯಕಗಳು ಇತ್ಯರ್ಥಗೊಳ್ಳದೆ ಬಾಕಿ ಇರುವುದರಿಂದ ಅಧಿವೇಶನದ ಅವಧಿಯನ್ನು ಆಗಸ್ಟ್ 7ರವರೆಗೂ ವಿಸ್ತರಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನ ಆಗಸ್ಟ್ 7ರವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ನಿಗದಿಪಡಿಸಲಾಗಿದ್ದ ಅವಧಿಗಿಂತಲೂ ಒಂದು ವಾರಗಳ ಕಾಲ ಅಧಿವೇಶನವನ್ನು ವಿಸ್ತರಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಜೂನ್ 17ರಂದು ಆರಂಭಗೊಂಡು ಜುಲೈ 26ರವರೆಗೆ ನಿಗದಿಯಾಗಿದ್ದ ಸಂಸತ್ ಅಧಿವೇಶನವನ್ನು ಆಗಸ್ಟ್ 7ರವರೆಗೆ ವಿಸ್ತರಿಸಲು ಸರಕಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಅಧಿವೇಶನ ವಿಸ್ತರಣೆಗೆ ಪ್ರತಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸಂಸತ್ತು ಹೆಚ್ಚು ದಿನ ಕಲಾಪ ನಡೆಸಬೇಕು ಎಂದು ಪ್ರತಿಪಕ್ಷಗಳು ಯಾವಾಗಲೂ ಹೇಳುತ್ತಿರುತ್ತವೆ. ನಾವು ಅದನ್ನೇ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಸುಮಾರು ಒಂದುವರೆ ವರ್ಷಗಳಿಂದಲೂ ಹಲವು ವಿಧೇಯಕಗಳು ಅಂಗೀಕಾರವಾಗದೆ ಹಾಗೆಯೇ ಉಳಿದಿದ್ದು, ಅವುಗಳನ್ನು ಈಗ ತೆಗೆದುಕೊಳ್ಳಲಾಗಿದೆ . ಈ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನವನ್ನು ವಿಸ್ತರಣೆ ಮಾಡಲು ಸರ್ಕಾರ ಚಿಂತಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ ನೀಡಿದ್ದಾರೆ.