ಬೆಂಗಳೂರು,ಜು 26(Daijiworld News/RD): ಮೈತ್ರಿ ಸರ್ಕಾರದಿಂದ ಅತೃಪ್ತಗೊಂಡು ರಾಜೀನಾಮೆ ನೀಡಿದ ಶಾಸಕರ ಪೈಕಿ ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಈ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ಸಭಾಧ್ಯಕ್ಷರು ಅತೃಪ್ತ ನಾಯಕರ ಅರ್ಜಿ ವಿಚಾರಣೆ ನಡೆಸಿದ್ದು, ಪಕ್ಷಾಂತರ ಕಾಯ್ದೆಯಡಿ ಕಾಂಗ್ರೆಸ್ ಶಾಸಕರಾದ, ರಾಣಿ ಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್, ಬೆಳಗಾವಿ ಕ್ಷೇತ್ರದ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ ಅನರ್ಹಗೊಂಡಿರುತ್ತಾರೆ. ಸ್ಪೀಕರ್ನ ಈ ಆದೇಶದಿಂದ ಆತಂಕಕ್ಕೀಡಾದ ಈ ಮೂವರು ಶಾಸಕರು, ಈ ಆದೇಶವನ್ನು ಪ್ರಶ್ನಿಸಿ ಇಂದು ಈ ಸುಪ್ರೀಂಕೋರ್ಟ್ಗೆ ಮೊರೆಹೋಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಈ ಮೂವರ ಶಾಸಕರು ಸ್ಪೀಕರ್ ನ ಆದೇಶವನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪೀಠದ ಮುಂದೆ ಅರ್ಜಿ ಸಲ್ಲಿಸುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇವರ ಪರವಾಗಿ ಮುಕುಲ್ ರೋಹ್ಟಗಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಇನ್ನು ಬಾಕಿ ಉಳಿದ ಅತೃಪ್ತ ಶಾಸಕರ ರಾಜೀನಾಮೆ ವಿಚಾರದ ಕುರಿತು ಶೀಘ್ರದಲ್ಲಿ ಒಂದು ನಿರ್ಣಯ ತೆಗೆದುಕೊಂಡು ನಿರ್ಧಾರ ವ್ಯಕ್ತಪಡಿಸಲಾಗುತ್ತದೆ ಎಂದು ಸ್ಪೀಕರ್ ತಿಳಿಸಿದರು. ಹೀಗಾಗಿ ಇನ್ನುಳಿದ ಅತೃಪ್ತ ಶಾಸಕರಲ್ಲಿ ಆತಂಕ ಮೂಡಿದೆ.