ನವದೆಹಲಿ, ಜು26(Daijiworld News/SS): ಕಳೆದ 22ರಂದು ಉಡಾವಣೆಯಾದ ಚಂದ್ರಯಾನ-2 ಶುಕ್ರವಾರ ತನ್ನ ಎರಡನೇ ಭೂ ಪರಿಭ್ರಮಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್'ಗಳ ವೈಜ್ಞಾನಿಕ ಪರಿಕರಗಳನ್ನು ಹೊತ್ತ ಚಂದ್ರಯಾನ-2 ಉಪಗ್ರಹ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ನಿಗದಿತ ಯೋಜನೆಯಂತೆ ಎರಡನೇ ಸುತ್ತಿನ ಭೂ ಸ್ಥಿರ ಕಕ್ಷೆ ಪ್ರಯಾಣವನ್ನು ಪೂರ್ಣಗೊಳಿಸಿದೆ ಎಂದು ಇಸ್ರೊ ಟ್ವೀಟ್ ಮಾಡಿದೆ.
ಮೂರನೇ ಭೂ ಸ್ಥಿರ ಕಕ್ಷೆಯಿಂದ ನೌಕೆಯನ್ನು ಹೆಚ್ಚಿಸುವ ಕಾರ್ಯ ಇದೇ 29ರಂದು ಅಪರಾಹ್ನ 2.30ರಿಂದ 3.30ರ ನಡುವೆ ನಡೆಯಲಿದೆ. ಚಂದ್ರಯಾನ-2 ಚಂದ್ರನಲ್ಲಿಗೆ ಆಗಸ್ಟ್ 20ರಂದು ತಲುಪಲಿದೆ. ಚಂದ್ರಯಾನ-2 ಮೂರು ಭಾಗಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಕಕ್ಷೆಗಾಮಿ(2,379 ಕೆಜಿ ತೂಕದ 8 ಪೇಲೋಡ್), ಲ್ಯಾಂಡರ್ ವಿಕ್ರಮ್(1,471 ಕೆಜಿ ತೂಕದ 4 ಪೇಲೋಡ್), ರೋವರ್ ಪ್ರಜ್ಞ್ಯಾನ್(27 ಕೆಜಿ ತೂಕದ ಎರಡು ಪೇಲೋಡ್) ಗಳನ್ನು ಹೊಂದಿದೆ.
ಜುಲೈ 22 ರಂದು ಚಂದ್ರಯಾನ-2 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ-ಮಾರ್ಕ್ 3 ವಾಹಕ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭದತ್ತ ಚಿಮ್ಮಿತ್ತು. ಚಂದ್ರಯಾನ-2 ಮೊದಲ ಸುತ್ತಿನ ಭೂ ಪರಿಭ್ರಮಣೆಯನ್ನು ಕಳೆದ 24ರಂದು ಪೂರ್ಣಗೊಳಿಸಿತ್ತು. ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈ ಮೇಲೆ ಸೆಪ್ಟೆಂಬರ್ 7ರಂದು ಇಳಿಯಲಿದೆ.