ಬೆಂಗಳೂರು, ಜು26(Daijiworld News/SS): ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಬಿಜೆಪಿಗೆ ಸಂಖ್ಯಾಬಲ ಇಲ್ಲದ ಕಾರಣ ಯಾವುದೇ ಕಾರಣಕ್ಕೂ ಹಕ್ಕು ಮಂಡನೆಯಾಗಲಿ ಅಥವಾ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವೇ ಇಲ್ಲ. ಬಿಜೆಪಿ ಮತ್ತು ಯಡಿಯೂರಪ್ಪನವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಹಾಗೂ ಸಾಮಾನ್ಯ ಜ್ಞಾನ ಹೊಂದುವುದು ಅವಶ್ಯಕ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿದೆ.
ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಹಕ್ಕಿಯಾಗಿದ್ದ ಯಡಿಯೂರಪ್ಪ ತಮ್ಮ ಅಪ್ರತಿಮ ಬುದ್ಧಿ ಶಕ್ತಿ ಬಳಸಿ ಕುದುರೆ ವ್ಯಾಪಾರ ನಡೆಸಿದ್ದಾರೆ, 2008 ರಿಂದ 2011ರ ವರೆಗೆ ಸಿಎಂ ಆಗಿದ್ದ ಅವಧಿಯಲ್ಲಿ ನಡೆದ ಹಗರಣಗಳನ್ನು ಕರ್ನಾಟಕ ಜನತೆ ನೆನಪಿಸಿಕೊಳ್ಳಬೇಕು ಎಂದು ಟ್ವಿಟ್ಟರ್'ನಲ್ಲಿ ಕಾಂಗ್ರೆಸ್ ಬರೆದುಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ನೈತಕತೆ ಇಲ್ಲ. ಬಹುಮತದ ಸರ್ಕಾರ ರಚನೆಯ ಕುರಿತು ರಾಜ್ಯಪಾಲರು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಹೇಳಿದೆ.
ವಿಧಾನಸಭೆಯ ಸಂಖ್ಯಾಬಲ 222, ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲ 112. ಆದರೆ ಬಿಜೆಪಿಯವರು ನಮಗೆ 105 ಶಾಸಕರ ಬೆಂಬಲವಿದೆ ಎಂದು ಸರ್ಕಾರ ರಚನಗೆ ಹಕ್ಕು ಮಂಡಿಸಿದ್ದು ಇದಕ್ಕೆ ರಾಜ್ಯಪಾಲರು ಬಹುಮತದ ಸರ್ಕಾರ ರಚನೆಯ ಕುರಿತು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಹೇಳಿದೆ.
ಕರ್ನಾಟಕ ಇತಿಹಾಸದಲ್ಲೇ ಇಂದು ಅತ್ಯಂತ ಕರಾಳ ದಿನ. ಬಿಜೆಪಿಯಿಂದಾಗಿ, ಪ್ರಜಾಪ್ರಭತ್ವದ ಕಗ್ಗೊಲೆಯಾಗುತ್ತಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.