ಬೆಂಗಳೂರು, ಜು 26(DaijiworldNews/SM): ಕಳೆದ 15 ದಿನಗಳ ರಾಜಕೀಯ ಬೆಳವಣಿಗೆಗಳ ಬಳಿಕ ಕರ್ನಾಟಕದಲ್ಲಿ ಕಮಲ ಅರಳಿದೆ. ಬಿ.ಎಸ್. ಯಡಿಯೂರಪ್ಪನವರು ನಾಲ್ಕನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇದೀಗ ನೂತನ ಸರಕಾರದ ಮುಂದಿರುವ ಸವಾಲು ಬಹುಮತ ಸಾಬೀತುಪಡಿಸುವುದಾಗಿದ್ದು, ಜುಲೈ 29ರಂದು ಬಹುಮತ ಸಾಬೀತು ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಶುಕ್ರವಾರ ಮೊದಲ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜನರು ತಿರಸ್ಕರಿಸುವ ಆಡಳಿತ ನೀಡುವುದಿಲ್ಲ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ.
"ಜುಲೈ 29ರಂದು ವಿಧಾನ ಮಂಡಲ ಅಧಿವೇಶನ ಕರೆಯಲು ತೀರ್ಮಾನ ಮಾಡಿದ್ದೇವೆ. ಅಂದು ಬೆಳಗ್ಗೆ 10 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಅಂದು ವಿಶ್ವಾಸಮತ ಸಾಬೀತು ಮಾಡುತ್ತೇವೆ ಎಂದು ಸಿಎಂ ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯದ ರೈತರ ಸಾಲ ಮನ್ನಾದ ಬಗ್ಗೆ ಪ್ರಸ್ತಾಪಿಸಿರುವ ಅವರು ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾಣಕೈಗೊಳ್ಳಲಾಗುವುದು ಎಂದರು.