ನವದೆಹಲಿ, ಜು 26(DaijiworldNews/SM): ಯಡಿಯೂರಪ್ಪ ಅವರು ಯಾವ ಲೆಕ್ಕಾಚಾರದಲ್ಲಿ ಸರಕಾರ ರಚನೆ ಮಾಡಿದ್ದಾರೆಯೋ ಗೊತ್ತಿಲ್ಲ. ಆದರೆ, ಮೈತ್ರಿ ಸರಕಾರವನ್ನು ಛಲದಿಂದ ಕೆಳಗಿಳಿಸಿದ ಅವರು ಎಷ್ಟು ದಿನ ಅಧಿಕಾರ ನಡೆಸುತ್ತಾರೆ ಎಂಬುವುದಾನ್ನು ನಾವು ಕೂಡ ನೋಡುತ್ತೇವೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 31 ರೊಳಗೆ ಹಣಕಾಸು ಮಸೂದೆಗಳಿಗೆ ಅಂಗೀಕಾರ ದೊರೆಯಬೇಕಿದೆ. ಇದಕ್ಕೆ ಕಾಂಗ್ರೆಸ್ ಅಡ್ಡಿಪಡಿಸುವುದಿಲ್ಲ. ಯಡಿಯೂರಪ್ಪ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ಪಕ್ಷದಲ್ಲೇ ಸಚಿವ ಆಕಾಂಕ್ಷಿಗಳಾ ಸಂಖ್ಯೆ ಹೆಚ್ಚಿರುವರಾಗ ಅತೃಪ್ತರಿಗೆ ಹೇಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂಬುವುದು ಗೊತ್ತಿಲ್ಲ ಎಂದಿದ್ದಾರೆ.
ಬಿಜೆಪಿಯಲ್ಲಿ ಹಿರಿಯ ವ್ಯಕ್ತಿಗಳಿಗೆ ಸ್ಥಾನಮಾನವಿಲ್ಲ. 75 ವರ್ಷ ದಾಟಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರಜೋಷಿ, ಸುಷ್ಮಾ ಸ್ವರಾಜ್ ಅವರಂತಹ ಹಿರಿಯ ನಾಯಕರನ್ನು ಮೂಲೆ ಗುಂಪು ಮಾಡಿದ್ದಾರೆ. ಹೀಗಿರುವಾಗ 75 ವರ್ಷ ದಾಟಿದ ಯಡಿಯೂರಪ್ಪ ಅವರಿಗೆ ಮಾತ್ರ ಬಿಜೆಪಿ ನಾಯಕರು ವಿಶೇಷ ವಿನಾಯಿತಿ ನೀಡಿದ್ದಾರೆ ಎಂಬ ಸದ್ದು ಬಿಜೆಪಿ ಪಾಳಯದಲ್ಲಿ ಮೊಳಗಿದೆ ಎಂದರು.