ಬೆಂಗಳೂರು, ಜು 26(DaijiworldNews/SM): ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತಹ ಸಂದರ್ಭ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ತೆರಳ ಬಾರದೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಖಡಕ್ ಸೂಚನೆ ಹೊರಡಿಸಿದ್ದರು. ಆದರೆ, ಇದನ್ನು ಧಿಕ್ಕರಿಸಿ ಮುಖಂಡರೊಬ್ಬರು ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
ತುಮಕೂರಿನ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅವರು ಪಕ್ಷದ ಅಧ್ಯಕ್ಷ ಆದೇಶವನ್ನು ಧಿಕ್ಕರಿಸಿದ್ದು, ಯಡಿಯೂರಪ್ಪ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.
ಕೆ.ಎನ್.ರಾಜಣ್ಣ ಅವರು ಮೈತ್ರಿ ಸರ್ಕಾರದೊಂದಿಗೆ ತೀವ್ರ ಅಸಮಾಧಾನ ಹೊಂದಿದ್ದರು. ಅಷ್ಟೆ ಅಲ್ಲದೆ, ಜಿ.ಪರಮೇಶ್ವರ್, ದೇವೇಗೌಡ ಸೇರಿದಂತೆ ಕಾಂಗ್ರೆಸ್ನ ಕೆಲವು ನಾಯಕರ ಬಗ್ಗೆ ಅಸಮಾಧಾನವನ್ನು ಹೊಂದಿದ್ದರು. ಬಹಿರಂಗವಾಗಿಯೇ ಅದನ್ನು ಹೊರಹಾಕಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಸೂಚನೆ ಧಿಕ್ಕರಿಸಿ ಯಡಿಯೂರಪ್ಪ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಜೆಪಿ ಕಡೆಗೆ ವಾಲಿದಂತೆ ಗೋಚರವಾಗುತ್ತಿದೆ.