ಬೆಂಗಳೂರು, ಜು 27 (Daijiworld News/RD): ನಾಲ್ಕನೇ ಬಾರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ, ಬಹುಮತ ಸಾಬೀತು ವೇಳೆ ಅತೃಪ್ತ ಶಾಸಕರು ನಾವು ಮುಂಬೈನಲ್ಲೇ ಇರುತ್ತೇವೆ, ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದ ಕಾರಣ, ಸೋಮವಾರ ಬಿಜೆಪಿ ಬಹುಮತ ಗೆಲ್ಲುವುದು ಬಹುತೇಕ ಖಚಿತ ಎಂದು ಸಿಎಂ ಹೇಳಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರು ಇನ್ನೂ ಕೂಡ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಹೀಗಾಗಿ ಅತೃಪ್ತರು ಸದನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಇದರಿಂದಾಗಿ ಸಂತಸಗೊಂಡ ಬಿಜೆಪಿ, ಅತೃಪ್ತ ಶಾಸಕರು ಗೈರುಹಾಜರಾದರೆ ಬಹುಮತ ಸಾಬೀತು ಪಡಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ
ಸದನಕ್ಕೆ ಹಾಜರಾಗದೆ ಮುಂಬೈನಲ್ಲೇ ಉಳಿದುಕೊಂಡರೆ ಮೈತ್ರಿ ಸರ್ಕಾರದ ಸಂಖ್ಯಾಬಲ ಕಡಿಮೆಯಾಗುತ್ತದೆ, ಇದರಿಂದಾಗಿ ಬಿಜೆಪಿ ಬಹುಮತದ ಮೂಲಕ ಗೆಲ್ಲವುದು ಬಹುಪಾಲು ಖಚಿತವಾಗಿದೆ. ಈಗಾಗಲೇ ಬಿಎಸ್ವೈ ಬಹುಮತ ಸಾಬೀತು ಮಾಡುವವರೆಗೂ ಅತೃಪ್ತ ಶಾಸಕರನ್ನು ಯಾರನ್ನೂ ಕೂಡ ಭೇಟಿಯಾಗದಿರಲು ನಿರ್ಧರಿಸಿದ್ದಾರೆ. ಬಹುಮತ ಗೆದ್ದ ಬಳಿಕ ಅಂದರೆ ಸೋಮವಾರ ಇಲ್ಲವೇ ಮಂಗಳವಾರ ಅತೃಪ್ತರು ರಾಜ್ಯಕ್ಕೆ ಹಿಂದಿರುಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ತಿಳಿದಿದೆ.