ಚಂಡೀಗಢ ಜು 27 (Daijiworld News/RD): ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಂಪೂರ್ಣ ನಿಷೇಧ ಹೇರಿದೆ.
ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ದೃಷ್ಠಿಯಿಂದ ನಗರಗಳ ಸಂಖ್ಯೆ ಏರಿಕೆಯಾಗುತ್ತಿರುವ ಪರಿಣಾಮವಾಗಿ ಅನೇಕ ಸಮಸ್ಯೆಗಳು ಉಂಟಾಗಿದೆ. ನಗರೀಕರಣದಿಂದಾಗಿ ವಾಹನಗಳ ಸಂಖ್ಯೆಯು ಅತ್ಯಧಿಕವಾಗಿದ್ದು, ವಾಹನಗಳ ದಟ್ಟನೆಯಿಂದ ಶಬ್ಧ ಮಾಲಿನ್ಯ ಉಂಟಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕವನ್ನು ಬಳಸುವುದನ್ನು ಪಂಜಾಬ್ ಹೈಕೋರ್ಟ್ ಸಂಪೂರ್ಣವಾಗಿ ನಿಷೇಧಿಸಿದೆ. ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕೆಂದು ನ್ಯಾ. ರಾಜೀವ್ ಶರ್ಮಾ ಅವರ ನೇತೃತ್ವದ ಪೀಠ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.
ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ದೃಷ್ಠಿಯಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ತಡೆಯೊಡ್ಡಿದೆ. ಹೈಕೋರ್ಟ್ನ ಈ ನಿಷೇಧ ದೇಗುಲ, ಮಸೀದಿ ಮತ್ತು ಗುರುದ್ವಾರಗಳಂತಹ ಧಾರ್ಮಿಕ ಕೇಂದ್ರಗಳಿಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಒಂದು ವೇಳೆ ಧ್ವನಿವರ್ಧಕಗಳ ಬಳಕೆ ಅವಶ್ಯಕತೆ ಇದ್ದಾಗ ಮಾತ್ರ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆದಿರಬೇಕು. ಅಲ್ಲದೆ, ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಅಥವಾ ಮ್ಯೂಸಿಕ್ ಸಿಸ್ಟಂ ಬಳಕೆ ಮಾಡಬಾರದು. ಜೊತೆಗೆ ಧ್ವನಿವರ್ಧಕಗಳ ಶಬ್ದಕ್ಕೂ ಮಿತಿ ಹೇರಲಾಗಿದೆ. ಧ್ವನಿವರ್ಧಕಗಳ ಸೌಂಡ್ 10 ಡೆಸಿಬಲ್ಗಿಂತಲೂ ಮೀರಬಾರದೆಂದು ಕೋರ್ಟ್ ಆದೇಶಿಸಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಲೌಡ್ ಸ್ಪೀಕರ್ನ್ನು ವರ್ಷದಲ್ಲಿ 15 ದಿನಗಳ ಕಾಲ ಮಾತ್ರ ಬಳಸಬೇಕು ಎನ್ನುವ ಮೂಲಕ ಈ ನಿಯಮವನ್ನು ಸಡಿಲಿಸಲಾಗಿದೆ.