ಮುಂಬೈ, ಜು27(Daijiworld News/SS): ಕಳೆದ ಒಂದು ವಾರದಿಂದ ಮುಂಬೈ ಸುತ್ತಮುತ್ತಲು ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಬೈಗೆ ಬರಬೇಕಾಗಿದ್ದ 17 ವಿಮಾನಗಳ ತನ್ನ ದಿಕ್ಕು ಬದಲಿಸಿದೆ. ರೈಲು ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ.
ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯೆಲ್ಲೆಲ್ಲಾ ನೀರು ತುಂಬಿಕೊಂಡು ನದಿಯಂತಾಗಿದೆ. ಇನ್ನೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಾಗೆಯೇ ವಿಮಾನಗಳು ಕೂಡ ತಮ್ಮ ಮಾರ್ಗವನ್ನು ಬದಲಿಸುವಂತಾಗಿದೆ. ಜು.26ರಂದು ಮುಂಬೈನಲ್ಲಿ ಭರ್ಜರಿ ಮಳೆಯಾಗಿದ್ದು, ಮುಂಬೈಗೆ ಬರಬೇಕಿದ್ದ ವಿಮಾನವನ್ನು ಅಲ್ಲೇ ಆಸುಪಾಸಿನ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದೀಗ ಮತ್ತೆ ವಿಮಾನ ಮತ್ತು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ರಾಯ್ಗಢ ಜಿಲ್ಲೆ, ಠಾಣೆ, ಪಾಲ್ಘರ್ ಮತ್ತು ಮುಂಬಯಿನಲ್ಲಿ ಮುಂದಿನ 3 ದಿನಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿರುವ ಭಾರತೀಯ ಹವಾಮಾನ ಇಲಾಖೆ ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಜತೆಗೆ ಗುಡುಗು ಸಿಡಿಲುಗಳ ಆರ್ಭಟ ಹೆಚ್ಚಲಿದೆ ಎಂದು ಜನಸಾಮಾನ್ಯರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಮುಂಬಯಿ ಹೊರತಾಗಿ ಒಡಿಶಾ, ಮಧ್ಯಪ್ರದೇಶ, ಛತ್ತೀಸ್ಗಢ, ವಿದರ್ಭಾ, ಗುಜರಾತ್ ಹಾಗೂ ರಾಜಸ್ಥಾನಗಳಲ್ಲಿಯೂ ಮುಂದಿನ ಮೂರು ದಿನ ಮಳೆ ಹೆಚ್ಚಾಗಲಿದೆ ಎಂದು ಇಲಾಖೆ ಹೇಳಿದೆ.