ಬೆಂಗಳೂರು, ಜು27(Daijiworld News/SS): ನಮ್ಮ ಪಕ್ಷ ಸುಲಭವಾಗಿ ಬಹುಮತ ಸಾಬೀತು ಪಡಿಸಲಿದೆ. ಸ್ವತಂತ್ರವಾಗಿ ಅಧಿಕಾರ ರಚಿಸುವುದು ನಮ್ಮ ಆದ್ಯತೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಯಡಿಯೂರಪ್ಪ, ಜುಲೈ 29ರಂದು ಬಹುಮತ ಸಾಬೀತು ಪಡಿಸುವುದಾಗಿ ಹೇಳಿದ್ದಾರೆ. ಈ ನಡುವೆ ಜೆಡಿಎಸ್ ಪಕ್ಷದ ಕೆಲವು ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡೋಣ ಎಂದು ತಿಳಿಸಿದ್ದಾರೆ. ಈ ಕುರಿತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ನಮ್ಮ ಪಕ್ಷ ಸುಲಭವಾಗಿ ಬಹುಮತ ಸಾಬೀತು ಪಡಿಸಲಿದೆ. ಸ್ವತಂತ್ರವಾಗಿ ಅಧಿಕಾರ ರಚಿಸುವುದು ನಮ್ಮ ಆದ್ಯತೆ. ನಮಗೆ ಜೆಡಿಎಸ್ ಬಾಹ್ಯ ಬೆಂಬಲ ಬೇಕಾಗಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ ಎಂದು ಶೋಭಾ ಹೇಳಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ಆಂಗೀಕಾರವಾದರೆ, ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ. ಯಾವ ಸಮಯದಲ್ಲಿ ಚುನಾವಣೆ ನಡೆದರೂ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನಮನೆಯ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಯಡಿಯೂರಪ್ಪಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆಸಿದ ಸಂಪುಟ ಸಭೆಯಲ್ಲಿ ಯಡಿಯೂರಪ್ಪ ಎರಡು ಪ್ರಮುಖ ನಿರ್ಣಯ ಕೈಗೊಂಡಿದ್ದಾರೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಂತೆ ರೈತರಿಗೆ 2 ಎರಡು ತಿಂಗಳಲ್ಲಿ 2 ಸಾವಿರ ರೂ. ವಿತರಿಸಲಾಗುವುದು. ನೇಕಾರರ 100 ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.