ಬೆಂಗಳೂರು, ಜು 27 (Daijiworld News/RD): ರಾಜ್ಯದಲ್ಲಿ ರಚನೆಯಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಡುವೆ ಇನ್ನೊಂದು ಸಮಸ್ಯೆ ತಲೆದೋರಿದೆ. ವಿಪಕ್ಷದ ನಾಯಕರ ಆಯ್ಕೆಯ ಕುರಿತು ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಚರ್ಚೆ ನಡೆಯುತ್ತಿದೆ.
ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ವಿಪಕ್ಷದ ಸ್ಥಾನದಲ್ಲಿ ಕೂರುವ ಸ್ಥಿತಿ ಒದಗಿ ಬಂದಿರುವುದರಿಂದ ವಿಪಕ್ಷದ ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡುವುದು ಎಂಬ ವಿಷಯ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಠಿಯಾಗಿದೆ. ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಈ ಸ್ಥಾನದಲ್ಲಿ ಮುಂದುವರಿಯಲಿದ್ದು ಪ್ರತಿಪಕ್ಷದ ನಾಯಕರನ್ನಾಗಿ ಬೇರೆಯವರನ್ನು ಮಾಡಬೇಕು ಎನ್ನುವ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ಮೂಡಿದೆ.
ಸೋಮವಾರ ಬಹುಮತ ಸಾಬೀತು ಪಡಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇದೇ ಸಂದರ್ಭದಲ್ಲಿ ಮಹತ್ವದ ಹಣಕಾಸು ವಿಧೇಯಕ ಮಂಡನೆಯಾಗಿ, ಅಂಗೀಕಾರವಾಗಬೇಕಿದೆ. ಇದರಿಂದಾಗಿ ಇನ್ನೊಮ್ಮೆ ವಿಪಕ್ಷದ ನಾಯಕನನ್ನು ಹುಡುಕುವ ಬದಲು ಈಗಾಗಲೇ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷದ ನಾಯಕರನ್ನಾಗಿ ಮುಂದುವರಿಯಲಿದ್ದು, ಅನಂತರ ಬೇಕಾದರೆ ನೂತನ ವಿಪಕ್ಷದ ನಾಯಕನನ್ನು ನೇಮಕ ಮಾಡುವುದಾಗಿ ಕಾಂಗ್ರೆಸ್ ಹೈ ಕಮಾಂಡ್ ಈ ಕುರಿತು ಚರ್ಚೆ ನಡೆಸಿದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ಬಂದಿದೆ.