ಮುಂಬಯಿ, ಜು 27 (Daijiworld News/RD): ಮಹಾರಾಷ್ಟ್ರದಲ್ಲಿ ಧಾರಕಾರವಾಗಿ ಸುರಿದ ಭಾರೀ ಮಳೆಗೆ ಮುಂಬೈ-ಕೋಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಚಲಿಸಲು ಸಾಧ್ಯವಾಗದೆ ಬದ್ಲಾಪುರ್ ಮತ್ತು ವಾಂಘಾನಿ ಸ್ಟೇಶನ್ಗಳ ನಡುವೆ ಸಿಲುಕಿ ಹಾಕಿಕೊಂಡಿದ್ದು ಸುಮಾರು 450 ಕ್ಕೂ ಅಧಿಕ ಪ್ರಯಾಣಿಕರು ರೈಲಿನಲ್ಲಿದ್ದು ಈಗಾಗಲೇ ಮೂರು ದೋಣಿಗಳನ್ನು ಕಳುಹಿಸಲಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ನೀಡಿದೆ.
ಇಂದು ಮುಂಜಾನೆ 3 ಗಂಟೆಯಿಂದ ಮುಂಬೈಯಿಂದ 100 ಕಿಲೋ ಮೀಟರ್ ದೂರದಲ್ಲಿ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಸಿಕ್ಕಿಹಾಕಿಕೊಂಡಿದ್ದು, ಪ್ರಯಾಣಿಕರ ರಕ್ಷಣೆಗೆ ರೈಲ್ವೆ ರಕ್ಷಣಾ ಪಡೆ ಮತ್ತು ಮುಂಬೈ ಪೊಲೀಸರು ಮತ್ತು ಎನ್ ಡಿಆರ್ ಎಫ್ ಪಡೆ ಸ್ಥಳಕ್ಕೆ ಧಾವಿಸಿದ್ದು, ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ಮುಂದಾಗಿದೆ.
ಪ್ರಯಾಣಿಕರನ್ನು ವಿಮಾನದಲ್ಲಿ ಏರ್ ಲಿಫ್ಟ್ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ಮಹಾರಾಷ್ಟ್ರ ಸರ್ಕಾರ ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿಕೊಂಡಿದೆ. ಈಗಾಗಲೇ ಸ್ಥಳಕ್ಕೆ ಮೂರು ದೋಣಿಗಳನ್ನು ಕಳುಹಿಸಲಾಗಿದೆ ಎಂದು ಮಹಾರಾಷ್ಟ್ರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾ ನಿರ್ದೇಶಕ ಬ್ರಿಜೇಶ್ ಸಿಂಗ್ ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಮುಂಬಯಿ ವಿಮಾನ ನಿಲ್ದಾಣದಿಂದ ಹೊರಡುವ 11 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದ್ದು, ಇನ್ನು ಆಗಮಿಸಬೇಕಿದ್ದ 9 ವಿಮಾನಗಳ ಮಾರ್ಗ ಬದಲಿಸಿದ್ದು, ಹತ್ತಿರ ಇರುವ ಇತರ ಏರ್ಪೋರ್ಟ್ಗಳಿಗೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿದೆ.