ಮಂಡ್ಯ, ಜು27(Daijiworld News/SS): ಯಾವುದೇ ವಿಘ್ನವಿಲ್ಲದೇ ಜನಪರ ಆಡಳಿತ ನಡೆಸಲು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇಲುಕೋಟೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್ವೈ ಇಂದು ಕಾಪನಹಳ್ಳಿಯಲ್ಲಿರುವ ಅವರ ಮನೆ ದೇವರಿಗೆ ನಮಿಸಿ, ತಮ್ಮ ಹುಟ್ಟೂರಾದ ಬೂಕನಕೆರೆಯ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ವಿಶ್ವಾಸ ಮತ ನೂರಕ್ಕೆ ನೂರು ಸಾಬೀತಾಗುತ್ತದೆ. ಸಿಎಂ ಆದ ಬಳಿಕ ಮೇಲುಕೋಟೆಗೆ ಬಂದು ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದಿದ್ದೇನೆ. ಸಿದ್ಧಲಿಂಗೇಶ್ವರನ ಸನ್ನಿದಿಯಲ್ಲಿ ದೇವರ ದರ್ಶನ ಮಾಡಿದೆ. ನಮ್ಮ ತಂದೆಯವರು ಇಲ್ಲಿಯೇ ನೆಲೆಸಿ ಪೂಜೆ ಮಾಡುತ್ತಿದ್ದರು ಎಂದು ಹೇಳಿದರು.
ಯಾವುದೇ ವಿಘ್ನವಿಲ್ಲದೇ ಜನರ ಸೇವೆ ಮಾಡಲು ದೇವರ ಆಶೀರ್ವಾದ ಪಡೆದಿದ್ದೇನೆ. ಕ್ಷೇತ್ರದಲ್ಲಿ ದಾಸೋಹ ಭವನದ ಕೊರತೆ ಇದೆ ಎಂದು ಜಿಲ್ಲಾಧಿಕಾರಿ ನನ್ನ ಗಮನಕ್ಕೆ ತಂದಿದ್ದಾರೆ. ಇನ್ನೊಂದು ವಾರದಲ್ಲಿ ಇಲ್ಲಿನ ಎಲ್ಲ ಕೊರತೆ ನಿವಾರಿಸಲು ಪ್ರಯತ್ನ ಪಡುತ್ತೇನೆ ಎಂದು ಹೇಳಿದ್ದಾರೆ.
ಆಗಸ್ಟ್ 2 ರಂದು ಬೆಂಗಳೂರಿನಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕ್ಷೇತ್ರದ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ದಾಸೋಹ ಭವನ ನಿರ್ಮಾಣಕ್ಕೆ 2 ಕೋಟಿ ಹಣ ಬಿಡುಗಡೆ ಕ್ರಮಕೈಗೊಳ್ಳುತ್ತೇನೆ ಎಂದು ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದರು.