ಬೆಂಗಳೂರು, ಜು 28 (Daijiworld News/RD): ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಜೊತೆಗೆ ವಿಪ್ ಉಲ್ಲಂಘನೆಯಡಿಯಲ್ಲಿ ಈಗಾಗಲೇ ಅನರ್ಹಗೊಂಡ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಇನ್ನು ಮುಂಬರುವ ಚುನಾವಣೆಗಳಿಗೆ ನಿಲ್ಲುವಂತಿಲ್ಲ ಎಂದು ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ತಮಿಳುನಾಡಿನಲ್ಲೂ ನಿರ್ಮಾಣವಾಗಿದ್ದು, ಆದರೆ ಅಲ್ಲಿ ಶಾಸಕರು ರಾಜೀನಾಮೆ ಕೊಟ್ಟ 6 ತಿಂಗಳೊಳಗೆ ಅಂದರೆ ಆ ಸಮಯದಲ್ಲಿ ವಿಧಾನಸಭಾ ಅವಧಿ ಕೂಡ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅನರ್ಹಗೊಂಡವರು ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಕರ್ನಾಟಕದಲ್ಲಿ ವಿಧಾನಸಭೆ ಅವಧಿ ಮುಗಿಯಲು ಇನ್ನೂ 3 ವರ್ಷ 10 ತಿಂಗಳು ಇರುವುದರಿಂದ ಚುನಾವಣೆಗೆ ಅನರ್ಹಗೊಂಡ ಶಾಸಕರು ನಿಲ್ಲುವಂತಿಲ್ಲ ಎಂದು ಸ್ಪೀಕರ್ ಹೇಳುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂವರು ಶಾಸಕರು ವಿಧಾನಸಭೆ ಅವಧಿ ಮುಗಿಯೋವರೆಗೆ ಅಂದರೆ 2023 ರ ಮೇ ತಿಂಗಳವರೆಗೆ ಉಪಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಬಹುವುದು ಎಂದು ಹೇಳಿದ ಚುನಾವಣಾ ಆಯೋಗದ ಅಭಿಪ್ರಾಯ ತಪ್ಪು ಎಂದು ಹೇಳಿದ್ದಾರೆ.
ತಪ್ಪು ಮಾಡಿದ ಶಾಸಕರಿಗೆ ಶಿಕ್ಷೆ ಆಗಲೇ ಬೇಕು, ರಾಜೀನಾಮೆ ಕೊಟ್ಟ ತಕ್ಷಣ ನಾವು ಸುರಕ್ಷಿತ ಅಂತ ತಿಳಿದುಕೊಳ್ಳುವುದು ತಪ್ಪು ಕಲ್ಪನೆ, ಅದು ಸಾಧ್ಯವಿಲ್ಲ.ಪ್ರತಿಯೊಬ್ಬ ಶಾಸಕರ ರಾಜೀನಾಮೆ ಬಗ್ಗೆಯೂ ನಾನು ಅಧ್ಯಯನ ಮಾಡುತ್ತಿದ್ದು, ಸುಲಭವಾಗಿ ರಾಜೀನಾಮೆ ಅಂಗೀಕರಿಸುವುದಿಲ್ಲ. ಹೀಗಾಗಿ ನಿಧಾನವಾಗಿ ಇನ್ನು ನಾಲ್ಕೈದು ದಿನಗಳಲ್ಲಿ ಬಾಕಿ ಉಳಿದ ಅತೃಪ್ತ ಶಾಸಕರ ನಿರ್ಧಾರವನ್ನು ತೆಗೆದುಕೊಂಡು ತಿಳಿಸುವುದಾಗಿ ಹೇಳಿದರು.
ಈಗಾಗಲೇ ಅನರ್ಹಗೊಂಡ ಮೂವರು ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದ್ದು. ಈ ಬಗ್ಗೆ ಮತನಾಡಿದ ಅತೃಪ್ತ ಶಾಸಕರು, ಸ್ಪೀಕರ್ ಅವರು ನಮ್ಮ ರಾಜೀನಾಮೆ ಅಂಗೀಕರಿಸದೆ, ನಮ್ಮನ್ನೂ ಅನರ್ಹಗೊಳಿಸಿದರೆ, ನಾವೂ ಕೋರ್ಟ್ ಮೊರೆ ಹೋಗುತ್ತೇವೆ ಅಲ್ಲಿ ನಮಗೆ ಜಯ ಸಿಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.