ಗುಜರಾತ್, ಜು 28 (Daijiworld News/RD): ಗುಜರಾತ್ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ಒಂದೇ ದಿನದಲ್ಲಿ ನಿರಂತರ 12 ತಾಸು, 9 ನಿಮಿಷಕ್ಕೂ ಅಧಿಕ ಸಮಯದವರೆಗೆ ಗಂಭೀರ ವಿಷಯಗಳನ್ನು ಚರ್ಚಿಸಿ, ಯಾವುದೇ ರೀತಿಯ ಕಾಲಹರಣ ಮಾಡದೆ ಕಲಾಪ ನಡೆಯುವ ಮೂಲಕ ರಾಜಕೀಯ ರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಠಿಸಿದ ಎಂದು ಸ್ಪೀಕರ್ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ವಿಧಾನಸಭಾ ಕಲಾಪ ಅಂದ ಕೂಡಲೇ ಇಲ್ಲದ ಸಲ್ಲದ ವಿಷಯ ಮಾತನಾಡಿ ಕಾಲಹರಣ ಮಾಡುವ ಶಾಸಕರು ಒಂದೆಡೆಯಾದರೆ, ಇನ್ನು ಕೆಲವೆಡೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ ಅಧಿವೇಶನವನ್ನು ಸುಸೂತ್ರವಾಗಿ ನಡೆಸುವ ಪೈಕಿ ಮತ್ತೊಂದೆಡೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಇತರ ರಾಜ್ಯಕ್ಕೆ ಮಾದರಿಯಾಗುವಂತೆ ಗುಜರಾತ್ನಲ್ಲಿ ನಡೆದ ಈ ಬಾರಿಯ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ಸಮಯಕ್ಕೆ ಮಹತ್ವ ಕೊಟ್ಟು, ರಾಜ್ಯದ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ, ಹೊಸ ದಾಖಲೆ ಬರೆದಿದ್ದಾರೆ.
ಶುಕ್ರವಾರ ಮುಂಜಾನೆ 10 ಗಂಟೆಗೆ ಶುರುವಾದ ಕಲಾಪವು ಮಧ್ಯರಾತ್ರಿ 12.06ರವರೆಗೆ ಸುಧೀರ್ಘವಾಗಿ ನಡೆಯಿತು. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಾಗಿದೆ ಎಂದು ಸ್ಪೀಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
1992ರಲ್ಲಿ ಗುಜರಾತ್ ವಿಧಾನಸಭೆ ಇದೇ ರೀತಿಯಾಗಿ ಕಲಾಪ ನಡೆಯುವ ಮೂಲಕ ಇತಿಹಾಸ ಸೃಷ್ಠಿಸಿದ್ದು, ಈ ಬಾರಿ ಒಂದೇ ದಿನ 12 ಗಂಟೆ 9 ನಿಮಿಷ ಕಾಲ ಕಲಾಪ ನಡೆಸುವ ಮೂಲಕ ತಾನೇ ಬರೆದ ಹಿಂದಿನ ದಾಖಲೆಯನ್ನು ಮುರಿದಿದೆ.