ಬೆಂಗಳೂರು, 28 ಜು (Daijiworld News/RD): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅತೃಪ್ತಗೊಂಡು ರಾಜೀನಾಮೆ ನೀಡಿದ 14 ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಈಗಾಗಲೇ ಅನರ್ಹಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಸಿದ್ದರಾಮಯ್ಯ, ಸ್ಪೀಕರ್ ಅತೃಪ್ತ ಶಾಸಕರ ಬಗ್ಗೆ ಕೈಗೊಂಡ ನಿರ್ಧಾರ ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ಸ್ಪೀಕರ್ನ ಈ ನಡೆಯನ್ನು ಕುರಿತು ಟ್ವೀಟ್ ಮಾಡಿದ ಸಿದ್ದರಾಮಯ್ಯ ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ ಎಂದು ಹೇಳಿದ್ದಾರೆ.
ಸರಕಾರಗಳು ಇಂದು ಬರುತ್ತವೆ ನಾಳೆ ಹೋಗುತ್ತವೆ. ಪದವಿ, ಅಧಿಕಾರ, ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟುಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಸದ್ಯದ ಬೆಳವಣಿಗೆಯ ಕುರಿತು ಬರೆದಿದ್ದಾರೆ.