ಬೆಂಗಳೂರು, ಜು 23 (DaijiworldNews/SM): ರಾಜ್ಯದಲ್ಲಿ ಆಡಳಿತದಲ್ಲಿದ್ದ ಮೈತ್ರಿ ಸರಕಾರ ಬಹುಮತ ಕಳೆದುಕೊಂಡ ಪರಿಣಾಮ ಈಗಾಗಲೇ ಪತನಗೊಂಡಿದೆ. ಆದರೆ ಮೈತ್ರಿ ಮುಂದುವರಿಸುವುದು ಅಥವಾ ಮೊಟಕುಗೊಳಿಸುವುದಾ ಎಂಬುವುದು ಇದೀಗ ಇರುವಂತಹ ಸವಾಲಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಮೈತ್ರಿ ಮುಂದುವರಿಕೆ ಕುರಿತು ಕಾಂಗ್ರೆಸ್ ನಾಯಕರ ತೀರ್ಮಾನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ನಂತರದ ಪರಿಸ್ಥಿತಿಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರು ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು.
ಅಲ್ಲದೆ, ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಬೇಕು ಎಂದು ತೀರ್ಮಾನ ಮಾಡಿದ್ದರು. ಹದಿನಾಲ್ಕು ತಿಂಗಳು ಸರ್ಕಾರ ಮಾಡಿದೆವು. ಇದೀಗ ಸರ್ಕಾರ ಪತನಗೊಂಡಿದೆ. ಮೈತ್ರಿ ಮುಂದುವರಿಕೆ ವಿಚಾರದಲ್ಲಿ ಈಗಲೂ ಕಾಂಗ್ರೆಸ್ ನಾಯಕರ ತೀರ್ಮಾನ ಎದುರು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅಧಿಕೃತ ಪ್ರತಿಪಕ್ಷ ನಾಯಕರಾಗಿರುತ್ತಾರೆ, ಕುಮಾರಸ್ವಾಮಿ ಜೆಡಿಎಸ್ ನಾಯಕರಾಗಿ ಸದನದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ವಿಧಾನಸಭೆಯಲ್ಲಿ ಸೋಮವಾರ ಹಣಹಾಸು ಮಸೂದೆಗೆ ನಾವು ಅಡ್ಡಿ ಮಾಡುವುದಿಲ್ಲ, ಒಪ್ಪಿಗೆ ನೀಡುತ್ತೇವೆ ಎಂದಿದ್ದಾರೆ.