ನವದೆಹಲಿ, ಜು29(Daijiworld News/SS): ಜಮ್ಮು- ಕಾಶ್ಮೀರದಲ್ಲಿ ಭಾರಿ ದಾಳಿ ನಡೆಸಲು ಪಾಕಿಸ್ತಾನದ ಮೂಲದ ಉಗ್ರಗಾಮಿ ಗುಂಪುಗಳು ಸಂಚು ರೂಪಿಸುವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉಗ್ರರಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಗ್ರರ ದಾಳಿಯ ಬೆದರಿಕೆ ನಡುವೆಯೂ ಈ ಬಾರಿ ದಾಖಲೆ ಪ್ರಮಾಣದ ರೀತಿಯಲ್ಲಿ ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಮಾಚ್ಚೀಲ್ ಸೆಕ್ಟರ್ ಬಳಿ ಭಾರತದೊಳಗೆ ನುಗ್ಗಲು ಉಗ್ರರು ಯತ್ನಿಸಿದ್ದಾರೆ. ಆದರೆ, ಆ ಪ್ರಯತ್ನವನ್ನು ಭಾರತೀಯ ಸೇನಾಪಡೆ ವಿಫಲಗೊಳಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದು, ಬಳಿಕ ಅಲ್ಲಿಗೆ ಹೆಚ್ಚುವರಿ ಸೈನಿಕರ ನಿಯೋಜನೆ ಅಗತ್ಯ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನ ಮೂಲದ ಉಗ್ರರಿಂದ ನಡೆಯಬಹುದಾದ ಸಂಭಾವ್ಯ ದಾಳಿಗೆ ಪ್ರತಿದಾಳಿ ನಡೆಯುವ ನಿಟ್ಟಿನಲ್ಲಿ 100 ಅರಸೇನಾ ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಅಜಿತ್ ದೋವಲ್ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿದ್ದಾರೆ ಎನ್ನಲಾಗಿದೆ.