ನವದೆಹಲಿ, ಜು29(Daijiworld News/SS): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಆಗಸ್ಟ್ 8 ರಂದು ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಲಿದ್ದಾರೆ.
2012ರಿಂದ 2017ರವರೆಗೂ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಪ್ರಣಬ್ ಮುಖರ್ಜಿ, 'ಪ್ರಣಬ್ ದಾ' ಎಂದು ಖ್ಯಾತರಾಗಿದ್ದಾರೆ. 83 ವರ್ಷದ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಪಕ್ಷದ ಸರ್ವಶ್ರೇಷ್ಠ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರಗಳಲ್ಲಿ ವಿತ್ತ ಖಾತೆ ಸೇರಿದಂತೆ ನಾನಾ ಬಗೆಯ ಖಾತೆಗಳನ್ನು ನಿಭಾಯಿಸಿದ ಮುಖರ್ಜಿ ಅವರು 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ದಶಕಗಳ ಕಾಲ ದೇಶಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರಕಾರ ಈ ವರ್ಷದ ಜನವರಿಯಲ್ಲಿ 'ಭಾರತ ರತ್ನ' ಪ್ರಶಸ್ತಿ ಘೋಷಿಸಿದೆ.
ಸರ್ವಪಲ್ಲಿ ರಾಧಾಕೃಷ್ಣನ್, ರಾಜೇಂದ್ರ ಪ್ರಸಾದ್, ಜಾಕೀರ್ ಹುಸೇನ್ ಮತ್ತು ವಿವಿ ಗಿರಿ ನಂತರ ಭಾರತ ರತ್ನ ಪ್ರಶಸ್ತಿ ಪಡೆದ ಮಾಜಿ ರಾಷ್ಟ್ರಪತಿಗಳ ಸಾಲಿನಲ್ಲಿ ಇದೀಗ ಪ್ರಣಬ್ ಮುಖರ್ಜಿಯೂ ಸೇರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇದೇ ಸಂದರ್ಭದಲ್ಲಿ ಮರಣೋತ್ತರವಾಗಿ ಸಾಮಾಜಿಕ ಹೋರಾಟಗಾರ ನಾನಾಜಿ ದೇಶ್ ಮುಖ್ ಹಾಗೂ ಭೂಪೇನ್ ಹಜಾರಿಕಾ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.